ಮುಂಬೈ ಮಳೆ ಅಬ್ಬರ: ಸತತ 3ನೇ ದಿನವೂ ಶಾಲೆ-ಕಾಲೇಜುಗಳಿಗೆ ರಜೆ; ರೆಡ್ ಅಲರ್ಟ್ ಮುಂದುವರಿಕೆ!

ಮುಂಬೈ: ಸತತ ಮೂರನೇ ದಿನವೂ ಭಾರಿ ಮಳೆ ಮತ್ತು ಬಿರುಗಾಳಿಗೆ ಮುಂಬೈ ತತ್ತರಿಸಿದೆ. ರಾಜ್ಯದ ಇತರ ಭಾಗಗಳಲ್ಲೂ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪಾಲ್ವರ್ ಜಿಲ್ಲೆ ಅತ್ಯಂತ ತೀವ್ರವಾಗಿ ತೊಂದರೆಗೊಳಗಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಮುಂಬೈಗೆ ನೀಡಿದ್ದ ರೆಡ್ ಅಲರ್ಟ್ ಅನ್ನು ಆರೆಂಜ್ ಅಲರ್ಟ್ಗೆ ಇಳಿಸಿದೆಯಾದರೂ, ನಗರದಲ್ಲಿ ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವುದರಿಂದ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಇಂದು ಕೂಡ ಮತ್ತೊಮ್ಮೆ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ.

ಮಂಗಳವಾರ ಆರೆಂಜ್ ಅಲರ್ಟ್ ಹೊಂದಿರುವ ಥಾಣೆ ಹಾಗೂ ರೆಡ್ ಅಲರ್ಟ್ನಲ್ಲಿರುವ ಪಾಲ್ವರ್ ಮತ್ತು ರಾಯಗಢ ಜಿಲ್ಲೆಗಳಲ್ಲೂ ಶಾಲೆ ಮತ್ತು ಕಾಲೇಜುಗಳನ್ನು ಮುಚ್ಚಲಾಗಿದೆ.
ಸೋಮವಾರ ಒಂದೇ ದಿನ ಗಾಳಿಯ ವೇಗ ಗಂಟೆಗೆ 77 ಕಿಮೀ ತಲುಪಿದ್ದರಿಂದ, ಮರ ಮತ್ತು ಕೊಂಬೆಗಳು ಬಿದ್ದಿರುವ ಬಗ್ಗೆ ಬಿಎಂಸಿಗೆ 523 ದೂರುಗಳು ಬಂದಿವೆ ಎಂದು ವರದಿಯಾಗಿದೆ. ಭಾನುವಾರ ಸಂಜೆಯಿಂದ ನಗರದಾದ್ಯಂತ ಮರ ಬಿದ್ದ ಘಟನೆಗಳಲ್ಲಿ ಕನಿಷ್ಠ 11 ಜನರು ಗಾಯಗೊಂಡಿದ್ದಾರೆ. ಬಲವಾದ ಗಾಳಿಯ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಬಿಎಂಸಿ ಮಂಗಳವಾರ ನಾಗರಿಕರ ಸುರಕ್ಷತೆಗಾಗಿ ಎಲ್ಲಾ ಪಾರ್ಕ್ ಮತ್ತು ಗಾರ್ಡನ್ಗಳನ್ನು ಮುಚ್ಚಲು ನಿರ್ಧರಿಸಿದೆ.
ಸೋಮವಾರ ತಡರಾತ್ರಿ, ಭಿವಂಡಿಯಲ್ಲಿ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ 13 ವರ್ಷದ ಬಾಲಕ ಮುಹಮ್ಮದ್ ಅಬೂಝರ್ ಕೊಚ್ಚಿಹೋಗಿದ್ದಾನೆ. ಕಳೆದ ಆರು ದಿನಗಳಲ್ಲಿ ನಗರದಲ್ಲಿ ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ ಹತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸೋಮವಾರ ಬೆಳಿಗ್ಗೆ ಮುಂಬೈನ ಖಾಸಗಿ ಕಚೇರಿಗಳನ್ನು ಮುಚ್ಚಲು ಸೂಚಿಸಿದೆ.
ಸೆಂಟ್ರಲ್ ಮತ್ತು ವೆಸ್ಟರ್ನ್ ರೈಲ್ವೆ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ರೈಲು ಸೇವೆಗಳು ಅಸ್ತವ್ಯಸ್ತಗೊಂಡಿದ್ದು, ಮಂಗಳವಾರ ಹೊರಡಬೇಕಿದ್ದ ರೈಲುಗಳು ಸೇರಿದಂತೆ 43 ರೈಲುಗಳನ್ನು ರದ್ದುಗೊಳಿಸಲಾಗಿದೆ. ಲೋನಾವಾಲಾ-ಕರ್ಜತ್ ಘಾಟ್ ವಿಭಾಗದಲ್ಲಿ ಸಂಭವಿಸಿದ ಭೂಕುಸಿತಗಳು ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದ್ದು ಸಿಆರ್ನಲ್ಲಿ 27 ಮತ್ತು ಡಬ್ಲೂಆರ್ನಲ್ಲಿ 16 ರೈಲುಗಳು ರದ್ದಾಗಿವೆ. ಪಾಲ್ವರ್ನಲ್ಲಿ 300 ಮಿಮೀಗಿಂತ ಹೆಚ್ಚು ಮಳೆಯಾಗಿದ್ದರಿಂದ ನಲಸೋಪಾರಾ ಬಳಿ ತೀವ್ರ ಜಲಾವೃತ ಉಂಟಾಗಿ, ವಸಾಯಿ ಮತ್ತು ವಿರಾರ್ ನಡುವಿನ ಉಪನಗರ (ಲೋಕಲ್ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಯಿತು ಹಾಗೂ ದೂರದ ಪ್ರಯಾಣದ ರೈಲುಗಳ ಸಂಚಾರಕ್ಕೂ ಅಡ್ಡಿಯಾಯಿತು. ಆದರೆ ಸ್ಥಳೀಯ ಉಪನಗರ ರೈಲುಗಳು ವಿಳಂಬವಾಗಿಯಾದರೂ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿದವು.
ಮುಖ್ಯಮಂತ್ರಿ ಫಡ್ನವೀಸ್ ಈ ಬಗ್ಗೆ ಪ್ರತಿಕ್ರಿಯಿಸಿ, ಗುಜರಾತ್ ಮತ್ತು ಮುಂಬೈ ನಡುವಿನ ರೈಲುಗಳು ಸಿಲುಕಿಕೊಂಡಿದ್ದು, ಜನರನ್ನು ರಸ್ತೆ ಮೂಲಕ ಕರೆತರಲಾಗುತ್ತಿದೆ. ಮುಂಬೈ-ಅಹಮದಾಬಾದ್ ಹೆದ್ದಾರಿ ಕಾಮಗಾರಿ ಇನ್ನು ಚಾಲ್ತಿಯಲ್ಲಿದೆ, ಆದ್ದರಿಂದ ಕೆಲವು ಭಾಗಗಳಲ್ಲಿ ನೀರು ನಿಂತು ರಸ್ತೆ ಮುಚ್ಚಲಾಗಿದೆ ಎಂದು ಹೇಳಿದರು.
ಖೋಪೋಲಿಯಲ್ಲಿನ ಸುರಂಗ 2ರ ನಿರ್ಗಮನ ದಾರಿಗೆ ಭೂಕುಸಿತದಿಂದ ಹಾನಿಯಾದ ನಂತರ ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯ ಮಿಸ್ಸಿಂಗ್ ಲಿಂಕ್ (ಹೊಸ ಸಂಪರ್ಕ ಮಾರ್ಗ) ಅನ್ನು ಮುಚ್ಚಬೇಕಾಯಿತು. ಪರಿಣಾಮವಾಗಿ, ಎರಡು ದೊಡ್ಡ ನಗರಗಳ ನಡುವಿನ ಸಂಚಾರವನ್ನು ಎರಡೂ ಬದಿಗಳಲ್ಲಿ ಸ್ಥಗಿತಗೊಳಿಸಲಾಯಿತು. ಸೋಮವಾರ ಮುಂಬೈ-ಗೋವಾ ಹೆದ್ದಾರಿಯಲ್ಲೂ ಭೂಕುಸಿತ ಸಂಭವಿಸಿದೆ. ಸೋಮವಾರ ತಡರಾತ್ರಿ ಮುಖ್ಯಮಂತ್ರಿ ಕಚೇರಿ ಎಕ್ಸ್ನಲ್ಲಿ “ಕನೆಕ್ಕಿಂಗ್ ಲಿಂಕ್ನಲ್ಲಿ ಸಂಚಾರ ಪುನರಾರಂಭಗೊಂಡಿದೆ; ವಾಹನ ಸಂಚಾರವನ್ನು ಮರುಸ್ಥಾಪಿಸಲಾಗಿದೆ” ಎಂದು ಪೋಸ್ಟ್ ಮಾಡಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಜುಲೈ 4ರಿಂದ 6ರವರೆಗೆ ರೆಡ್ ಅಲರ್ಟ್ ಜಾರಿಗೊಳಿಸಿದ್ದರಿಂದ, ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತನ್ನ ತುರ್ತು ಕಾರ್ಯಾಚರಣೆ ತಂಡಗಳನ್ನು ಸಕ್ರಿಯಗೊಳಿಸಿದೆ. ದುರ್ಬಲ ಸ್ಥಳಗಳಲ್ಲಿ ಹೆಚ್ಚುವರಿ ಸಿಬ್ಬಂದಿ, ರಕ್ಷಣಾ ಸಾಧನಗಳು ಮತ್ತು ವಿಶೇಷ ತಂಡಗಳನ್ನು ನಿಯೋಜಿಸಲಾಗಿತ್ತು. ಮುಲುಂಡ್ ಮತ್ತು ಭಾಂಡೂಪ್ನಲ್ಲಿ ದಾಖಲಾದ ಅಪಘಾತಗಳ ಹಿನ್ನೆಲೆಯಲ್ಲಿ ಬಿಎಂಸಿ ನಿರ್ಮಾಣ ಸ್ಥಳಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಮಂಗಳವಾರ ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂಬೈ ವಿಶ್ವವಿದ್ಯಾಲಯವು ಮುಂದೂಡಿದೆ. ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಅದರ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು ಎಂದು ವಿಶ್ವವಿದ್ಯಾಲಯವು ಸುತ್ತೋಲೆಯಲ್ಲಿ ತಿಳಿಸಿದೆ.