ಮಂಗಳೂರು: ತಂಗಿ ಆತ್ಮಹ*ತ್ಯೆ ದುಃಖದಲ್ಲಿದ್ದ ಗಲ್ಫ್ನಿಂದ ವಾಪಸಾಗಿದ್ದ ಸಹೋದರ ಲಾಡ್ಜ್ನಲ್ಲಿ ಶವವಾಗಿ ಪತ್ತೆ!

ಮಂಗಳೂರು : ನೀಟ್ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗ ಕೋಚಿಂಗ್ ಸೆಂಟರ್ನ ಹಾಸ್ಟೆಲ್ನಲ್ಲಿ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದ ದುರಂತ ಮಾಸುವ ಮುನ್ನವೇ, ಗಲ್ಫ್ನಿಂದ ವಾಪಸಾಗಿ ನಾಪತ್ತೆಯಾಗಿದ್ದ ಆಕೆಯ ಸಹೋದರ ಮಂಗಳೂರಿನ ಲಾಡ್ಜ್ ಕೋಣೆಯೊಂದರಲ್ಲಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ಸಂಭವಿಸಿದೆ. ಕೇರಳದ ಬೇಕಲ್ನ ಪಳ್ಳಿಕ್ಕರ ಮುಕೂಡ್ ನಿವಾಸಿ ಮಹೇಶ್ ಅವರ ಪುತ್ರ ಅರ್ಜುನ್ ಮಹೇಶ್ (24) ಮೃತ ದುರ್ದೈವಿ.

ಕಳೆದ ಜೂನ್ ತಿಂಗಳಿನಲ್ಲಿ ಪಾಲಾದ ತರಬೇತಿ ಕೇಂದ್ರದ ಹಾಸ್ಟೆಲ್ನಲ್ಲಿ ಅರ್ಜುನ್ ಅವರ ತಂಗಿ ಐಜಾ ಆರ್. ಮಹೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಗೊಂದಲದ ಬಳಿಕ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಐಜಾ, ತೀವ್ರ ಮಾನಸಿಕ ಒತ್ತಡದಿಂದ ಈ ಹಂತಕ್ಕೆ ತಲುಪಿದ್ದರು ಎನ್ನಲಾಗಿತ್ತು. ತಂಗಿಯ ಮರಣದ ಸುದ್ದಿ ತಿಳಿದು ಗಲ್ಫ್ನಿಂದ ಮನೆಗೆ ಬಂದಿದ್ದ ಅರ್ಜುನ್, ಬಳಿಕ ಮತ್ತೆ ಉದ್ಯೋಗಕ್ಕೆ ತೆರಳಿದ್ದರು.
ಭಾನುವಾರ ಗಲ್ಫ್ನಿಂದ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದ ಅರ್ಜುನ್, ಮನೆಗೆ ವಾಪಸಾಗುತ್ತಿರುವುದಾಗಿ ಸ್ನೇಹಿತರಿಗೆ ತಿಳಿಸಿದ್ದರು. ಭಾನುವಾರ ಮಧ್ಯಾಹ್ನ ತಾಯಿಗೂ ಕರೆ ಮಾಡಿದ್ದರೂ ಮನೆಗೆ ಬರುವ ವಿಚಾರ ತಿಳಿಸಿರಲಿಲ್ಲ. ನಂತರ ಸ್ನೇಹಿತರು ಕುಟುಂಬಕ್ಕೆ ಮಾಹಿತಿ ನೀಡಿದಾಗ, ಕುಟುಂಬಸ್ಥರು ಅರ್ಜುನ್ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು.
ಆತಂಕಗೊಂಡ ಕುಟುಂಬಸ್ಥರು ಮಂಗಳೂರಿಗೆ ಆಗಮಿಸಿ ಹುಡುಕಾಟ ನಡೆಸಿದ್ದರಾದರೂ ಆತ ಪತ್ತೆಯಾಗಿರಲಿಲ್ಲ. ಸೋಮವಾರ ಮಧ್ಯಾಹ್ನ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮರವೂರಿನಲ್ಲಿರುವ ಲಾಡ್ಜ್ ಕೋಣೆಯೊಂದರಲ್ಲಿ ಅರ್ಜುನ್ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಬಜ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಒಂದೇ ಕುಟುಂಬದ ಇಬ್ಬರು ಯುವ ಮಕ್ಕಳು ಸಾಲಾಸಾಲಾಗಿ ಮೃತಪಟ್ಟಿರುವುದು ಕುಟುಂಬಸ್ಥರನ್ನು ಹಾಗೂ ಸ್ಥಳೀಯರನ್ನು ತೀವ್ರ ಶೋಕಸಾಗರದಲ್ಲಿ ಮುಳುಗಿಸಿದೆ. ಘಟನೆಗೆ ನಿಖರ ಕಾರಣ ಏನೆಂಬುದರ ಕುರಿತು ಬಜ್ಪೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ