ಮಲ್ಕಾನ್ ಗಿರಿ: ಚಿಕಿತ್ಸೆ ವೇಳೆ 7 ತಿಂಗಳ ಗರ್ಭಿಣಿ ಸಾ*ವು; ವೈದ್ಯರ ಮೇಲೆ ಹಲ್ಲೆ ನಡೆಸಿದ ಉದ್ರಿಕ್ತ ಗುಂಪು!

ಮಲ್ಕಾನ್ ಗಿರಿ (ಒಡಿಶಾ): ಹಾವು ಕಡಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆಂದು ಹೇಳಲಾಗಿರುವ ಗರ್ಭಿಣಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಆಕೆಯ ಕುಟುಂಬದ ಸದಸ್ಯರು ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಬುಧವಾರ ಮಲ್ಕಾನ್ ಗಿರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಮಲ್ಕಾನ್ ಗಿರಿ ಬ್ಲಾಕ್ ನ ಎಂವಿ-43 ಗ್ರಾಮದ ನಿವಾಸಿ ಬಂದನಾ ಮೊಂಡಲ್ (29) ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ಹಾವು ಕಡಿತದ ಚಿಕಿತ್ಸೆಗೆಂದು ಆಕೆಯನ್ನು ಮಲ್ಕಾನ್ ಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಡಾ. ಸಿದ್ಧಾಂತ್ ಆದರ್ಶ್ ಆಕೆಗೆ ಚಿಕಿತ್ಸೆ ನೀಡಿದ್ದಾರೆ. ಆದರೆ, ಆಕೆ ಬುಧವಾರ ಮೃತಪಟ್ಟಿದ್ದಾಳೆ. ಏಳು ತಿಂಗಳ ಗರ್ಭಿಣಿಯಾಗಿದ್ದ ಬಂದನಾ ಮೊಂಡಲ್ ಸಾವಿನಿಂದ ಆಕ್ರೋಶಗೊಂಡ ಆಕೆಯ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಡಾ. ಸಿದ್ಧಾಂತ್ ಚಿಕಿತ್ಸೆ ನೀಡುವ ವೇಳೆ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿ, ಅವರ ಮೇಲೆ ಆಸ್ಪತ್ರೆಯ ಆವರಣದಲ್ಲಿ ಹಲ್ಲೆ ನಡೆಸಿದ್ದಾರೆ.

ಬಂದನಾ ಮೊಂಡಲ್ ತನಗೆ ಹಾವು ಕಡಿದಿದೆ ಎಂದು ಪದೇ ಪದೇ ತಿಳಿಸಿದರೂ, ಹಾವು ಕಡಿತದ ಯಾವುದೇ ಗುರುತು ಕಾಣದೆ ಇದ್ದುದರಿಂದ, ಡಾ. ಸಿದ್ಧಾಂತ್ ವಾಂತಿಯನ್ನು ನಿಲ್ಲಿಸಲು ಮಾತ್ರ ಚಿಕಿತ್ಸೆ ನೀಡಿದ್ದಾರೆ. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾದ ಬಳಿಕವಷ್ಟೇ ಆಕೆಗೆ ಹಾವು ಕಡಿತ ನಿರೋಧಕ ಚುಚ್ಚುಮದ್ದನ್ನು ನೀಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಳು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆಯೇ ಆಸ್ಪತ್ರೆಗೆ ಧಾವಿಸಿದ ಮಲ್ಕಾನ್ ಗಿರಿ ಪಟ್ಟಣ ಠಾಣೆ ಪೊಲೀಸರು, ವೈದ್ಯರನ್ನು ಉದ್ರಿಕ್ತ ಗುಂಪಿನಿಂದ ರಕ್ಷಿಸಿದರು.
ಡಾ. ಸಿದ್ಧಾಂತ್ ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಲ್ಕಾನ್ ಗಿರಿ ಪಟ್ಟಣ ಠಾಣೆಯ ಠಾಣಾಧಿಕಾರಿ ರೇಗನ್ ಕಿಂದೊ ತಿಳಿಸಿದ್ದಾರೆ. ಈ ಸಂಬಂಧ ಮತ್ತಷ್ಟು ತನಿಖೆ ಮುಂದುವರಿದಿದೆ.
ವೈದ್ಯರ ಮೇಲಿನ ಹಲ್ಲೆಯಲ್ಲಿ ಭಾಗಿಯಾಗಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಪಾಟೀಲ್ ಭರವಸೆ ನೀಡಿದ್ದಾರೆ.
ಈ ನಡುವೆ ಡಾ. ಸಿದ್ಧಾಂತ್ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿರುವ ಒಡಿಶಾ ವೈದ್ಯಕೀಯ ಸೇವೆಗಳ ಸಂಘ, ಮುಂದಿನ 48 ಗಂಟೆಗಳಲ್ಲಿ ಹಲ್ಲೆಕೋರರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದೆ.