ಮಹಾರಾಷ್ಟ್ರ ಟಿಇಟಿ ಪ್ರಶ್ನೆ ಪತ್ರಿಕೆ ಸೋರಿಕೆ: ಮೂವರ ಬಂಧನ, ಅಂತಾರಾಜ್ಯ ಜಾಲದ ಶಂಕೆ!

ಮುಂಬೈ: ಮಹಾರಾಷ್ಟ್ರದ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ತನಿಖೆಯನ್ನು ವಿಶೇಷ ತನಿಖಾ ತಂಡ ತೀವ್ರಗೊಳಿಸಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದೆ. ಆದರೆ, ಈ ಸೋರಿಕೆಯ ಸೂತ್ರಧಾರಿ ಸೇರಿದಂತೆ ಇನ್ನೂ ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತ ಆರೋಪಿಗಳನ್ನು ಬಿಹಾರದ ಪಾಟ್ನಾ ನಿವಾಸಿಗಳಾದ ಆಕಾಶ್ ಕುಮಾರ್ (30), ರಾಜೀವ್ ಶಾ (45) ಹಾಗೂ ಹರ್ಯಾಣದ ಪಾಣಿಪತ್ ನ ನಿವಾಸಿ ಧೀರಜ್ ಕುಮಾರ್ (28) ಎಂದು ಗುರುತಿಸಲಾಗಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆಯ ತನಿಖೆಯನ್ನು ವಿಸ್ತರಿಸಿರುವ ವಿಶೇಷ ತನಿಖಾ ತಂಡ, ಈ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಅಂತಾರಾಜ್ಯ ಜಾಲ ಇರಬಹುದು ಎಂದು ಶಂಕಿಸಿದೆ.

ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಜೂನ್ 27ರಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಭಿವಾಂಡಿ ಹೊರವಲಯದಲ್ಲಿರುವ ಕೊಂಗಾಂವ್ ಗ್ರಾಮದಿಂದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯ ವೇಳೆ ಆರೋಪಿಗಳಿಂದ ಟಿಇಟಿ-2026 ಪ್ರಶ್ನೆ ಪತ್ರಿಕೆಗಳ ನಾಲ್ಕು ಸೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರವಿವಾರ ನಿಗದಿಯಾಗಿದ್ದ ಪರೀಕ್ಷೆಗೆ ಸಿದ್ಧಪಡಿಸಲಾಗಿದ್ದ ನೈಜ ಪ್ರಶ್ನೆ ಪತ್ರಿಕೆಗಳೊಂದಿಗೆ ವಶಪಡಿಸಿಕೊಂಡಿರುವ ಪ್ರಶ್ನೆಪತ್ರಿಕೆಗಳಿಗೆ ಹೋಲಿಕೆ ಇದೆ ಎಂದು ಶಿಕ್ಷಣ ಇಲಾಖೆ ದೃಢಪಡಿಸಿದೆ.
ಈ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವ ಮೂಲಕ ಆರೋಪಿಗಳು ಸುಮಾರು 1.5 ಕೋಟಿ ರೂ. ಹಣ ಸಂಪಾದಿಸುವ ಯೋಜನೆ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ, ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರವಿವಾರ ನಿಗದಿಯಾಗಿದ್ದ ಮಹಾರಾಷ್ಟ್ರ ಟಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಪರೀಕ್ಷೆಯನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದ ನಿರ್ಧಾರದಿಂದ ಸುಮಾರು 6 ಲಕ್ಷ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಿದೆ ಎಂದು ವರದಿಯಾಗಿದೆ.