ಲಕ್ನೋ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಪ್ರಯಾಣಿಸುತ್ತಿದ್ದ ಶತಾಬ್ದಿ ರೈಲಿನ ಮೇಲೆ ಕಲ್ಲು ತೂರಾಟ!

ಲಕ್ಕೋ: ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ಅವರು ಕಾನ್ಸುರದಿಂದ ದೆಹಲಿಗೆ ತೆರಳುತ್ತಿದ್ದ ಶತಾಬಿ ರೈಲಿನ ಮೇಲೆ ಫಿರೋಜಾಬಾದ್ ಬಳಿ ಕಲ್ಲು ಎಸೆದ ಘಟನೆ ವರದಿಯಾಗಿದೆ. ಇದರಿಂದ ರೈಲು ಜಖಂಗೊಂಡಿದೆ.
ಫಿರೋಜಾಬಾದ್ ಹೊರವಲಯದಲ್ಲಿ ರಾತ್ರಿ 8 ಗಂಟೆಯ ವೇಳೆಗೆ ರೈಲಿನ (ಸಂಖ್ಯೆ 12003) ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದು, ಮೋಹನ್ ಭಾಗ್ವತ್ ಪ್ರಯಾಣಿಸುತ್ತಿದ್ದ ಇ1 ಕೋಚ್‌ಗೆ ಕಲ್ಲು ಬಡಿದಿದೆ ಎಂದು ತಿಳಿದುಬಂದಿದೆ.
ಪರಿಣಾಮವಾಗಿ ಬೋಗಿಯ ಕಿಟಕಿ ಒಡೆದಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿತು. ಆದರೆ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಮೋಹನ್ ಭಾಗ್ವತ್ ಸೇರಿದಂತೆ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಘಟನೆ ಬಳಿಕ ರೈಲ್ವೆ ಅಧಿಕಾರಿಗಳು ಹಾನಿಗೀಡಾದ ಬೋಗಿಯ ತಪಾಸಣೆ ನಡೆಸಿ, ರೈಲು ಪ್ರಯಾಣ ಮುಂದುವರಿಸುವ ಮುನ್ನ ಪರಿಸ್ಥಿತಿ ಅವಲೋಕಿಸಿದರು. ಸರ್ಕಾರಿ ರೈಲ್ವೆ ಪೊಲೀಸರು ಮತ್ತು ರೈಲ್ವೆಯ ಇತರ ವಿಭಾಗಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಆದರೆ ಕಲ್ಲು ಹೇಗೆ ತೂರಿ ಬಂತು ಹಾಗೂ ಇದಕ್ಕೆ ಯಾರು ಕಾರಣ ಎನ್ನುವ ಬಗ್ಗೆ ಅಧಿಕಾರಿಗಳಿಂದ ಯಾವುದೇ ದೃಢೀಕರಣ ಇದುವರೆಗೆ ಬಂದಿಲ್ಲ. ಅಧಿಕಾರಿಗಳು ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದು, ತನಿಖೆಯ ಭಾಗವಾಗಿ ಸಾಕ್ಷ್ಯಗಳನ್ನು ಕಲೆಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಗತ್ಯ ತಪಾಸಣೆ ಬಳಿಕ ಶತಾಬಿ ರೈಲು ದೆಹಲಿಯತ್ತ ಪ್ರಯಾಣ ಮುಂದುವರಿಸಿದ್ದು, ರಾತ್ರಿ 10.13ಕ್ಕೆ ರಾಜಧಾನಿ ತಲುಪಿದೆ.