ಕುವೈತ್: ಇರಾನ್ ಭೀಕರ ಕ್ಷಿಪಣಿ ದಾಳಿಗೆ ವಿಮಾನ ನಿಲ್ದಾಣ ಧ್ವಂಸ; ಭಾರತೀಯ ಪ್ರಜೆ ಸಾ*ವು, 63 ಜನರಿಗೆ ಗಾಯ!

ಕುವೈತ್: ಅಮೆರಿಕದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ನ ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ಸ್ ಪಡೆಗಳು (IRGC) ಕುವೈತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಬುಧವಾರ ನಡೆಸಿದ ಭೀಕರ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ಓರ್ವ ಭಾರತೀಯ ಪ್ರಜೆ ಸಾವನ್ನಪ್ಪಿದ್ದಾರೆ. ದಾಳಿಯ ತೀವ್ರತೆಗೆ ವಿಮಾನ ನಿಲ್ದಾಣದ ಟರ್ಮಿನಲ್-1 ಭೀಕರವಾಗಿ ಜಖಂಗೊಂಡಿದ್ದು, ಕನಿಷ್ಠ 63 ಜನರು ಗಾಯಗೊಂಡಿದ್ದಾರೆ ಎಂದು ಕುವೈತ್ ಆರೋಗ್ಯ ಸಚಿವಾಲಯ ತಿಳಿಸಿದೆ.

ದುರಂತದಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿರುವುದನ್ನು ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಖಚಿತಪಡಿಸಿದೆ. ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿರುವ ರಾಯಭಾರ ಕಚೇರಿ, ಗಾಯಾಳುಗಳಿಗೆ ಹಾಗೂ ಸಂತ್ರಸ್ತ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ಮತ್ತು ವೈದ್ಯಕೀಯ ನೆರವು ನೀಡಲು ಕುವೈತ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದೆ.
ದಾಳಿಯ ತೀವ್ರತೆಯ ಬಗ್ಗೆ ಮಾಹಿತಿ ನೀಡಿರುವ ಕುವೈತ್ ನ ಆರೋಗ್ಯ ಸಚಿವಾಲಯದ ವಕ್ತಾರ ಅಬ್ದುಲ್ಲಾ ಅಲ್-ಸನದ್, “ಗಾಯಗೊಂಡ 63 ಜನರನ್ನು ತುರ್ತು ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ರಭಸದಿಂದಾಗಿ ಹಲವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಸೆರೆಬ್ರಲ್ ರಕ್ತಸ್ರಾವ (ಮೆದುಳಿನಲ್ಲಿ ರಕ್ತಸ್ರಾವ) ಉಂಟಾಗಿದೆ. ಇನ್ನು ಕೆಲವರ ಕೈಕಾಲುಗಳು ಅಂಗಚ್ಛೇದನಗೊಂಡಿದ್ದು, ಪರಿಸ್ಥಿತಿ ಗಂಭೀರವಾಗಿದೆ” ಎಂದು ಹೇಳಿದ್ದಾರೆ. ಗಾಯಾಳುಗಳ ರಕ್ಷಣೆಗಾಗಿ ವಿಮಾನ ನಿಲ್ದಾಣಕ್ಕೆ ತಕ್ಷಣವೇ 25 ಕ್ಕೂ ಹೆಚ್ಚು ಆಂಬ್ಯುಲೆನ್ಸ್ಗಳನ್ನು ರವಾನಿಸಲಾಗಿದೆ.
ಟರ್ಮಿನಲ್-1 ರ ಮೇಲೆ ನಡೆದ ಭೀಕರ ದಾಳಿಯಿಂದಾಗಿ ರನ್ವೇ ಮತ್ತು ವಿಮಾನ ನಿಲ್ದಾಣದ ಸೌಲಭ್ಯಗಳಿಗೆ ಭಾರಿ ಹಾನಿಯಾಗಿದೆ. ಭದ್ರತಾ ದೃಷ್ಟಿಯಿಂದ ಕುವೈತ್ ತನ್ನ ದೇಶದ ವಿಮಾನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ವಕ್ತಾರ ಅಬ್ದುಲ್ಲಾ ಅಲ್-ರಾಜ್ಹಿ ಪ್ರಕಟಿಸಿದ್ದಾರೆ.
ಇರಾನಿನ ತೈಲ ಟ್ಯಾಂಕರ್ ಮತ್ತು ದ್ವೀಪದ ಮೇಲೆ ಇತ್ತೀಚೆಗೆ ಅಮೆರಿಕ ಪಡೆಗಳು ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಿರುವುದಾಗಿ ಇರಾನ್ನ ಕ್ರಾಂತಿಕಾರಿ ಪಡೆಗಳು ತಮ್ಮ ಅಧಿಕೃತ ಟೆಲಿಗ್ರಾಮ್ ಚಾನೆಲ್ನಲ್ಲಿ ಬಹಿರಂಗಪಡಿಸಿವೆ. ಹೆಲಿಕಾಪ್ಟರ್ಗಳನ್ನು ಹೊಂದಿರುವ ಕುವೈತ್ನ ‘ಅಲಿ ಅಲ್ ಸಲೇಂ’ ವಾಯುನೆಲೆ ಹಾಗೂ ಬಹ್ರೇನ್ನಲ್ಲಿರುವ ಯುಎಸ್ ಐದನೇ ಫ್ಲೀಟ್ನ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಈ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ.
ನಾಗರಿಕ ಮೂಲಸೌಕರ್ಯ ಹಾಗೂ ವಿಮಾನ ನಿಲ್ದಾಣದ ಮೇಲಿನ ದಾಳಿಯನ್ನು ಕುವೈತ್ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಇತ್ತ ಇರಾನ್ನ ಸರಣಿ ಆಕ್ರಮಣಗಳ ವಿರುದ್ಧ ಗಲ್ಫ್ ರಾಷ್ಟ್ರಗಳು ಒಗ್ಗೂಡಬೇಕಾದ ಅನಿವಾರ್ಯತೆ ಇದೆ ಎಂದು ಯುಎಇ ಅಧ್ಯಕ್ಷೀಯ ಸಲಹೆಗಾರ ಅನ್ವರ್ ಗರ್ಗಶ್ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹೊರಹಾಕಿದ್ದಾರೆ. “ಈ ಆಕ್ರಮಣವು ಕೇವಲ ಒಂದು ದೇಶವನ್ನು ಗುರಿಯಾಗಿಸಿಕೊಂಡಿಲ್ಲ, ಇದು ನಮ್ಮ ಇಡೀ ಗಲ್ಫ್ ವಲಯದ ಮೇಲಿನ ದಾಳಿ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.