ಕೇರಳ: ನದಿಗೆ ಬಿದ್ದ ಸ್ನೇಹಿತೆಯನ್ನು ಬದುಕಿಸಿ ತಾನು ಪ್ರಾಣ ಬಿಟ್ಟ 26 ವರ್ಷದ ಟೆಕ್ಕಿ ಅನುಪಮಾ!

ತಿರುವನಂತಪುರಂ : ನದಿಯ ನೀರಿಗೆ ಆಕಸ್ಮಿಕವಾಗಿ ಜಾರಿ ಬಿದ್ದ ತನ್ನ ಸ್ನೇಹಿತೆಯನ್ನು ರಕ್ಷಿಸಲು ಹೋಗಿ, ನೀರಿನ ಪ್ರವಾಹಕ್ಕೆ ಸಿಲುಕಿ 26 ವರ್ಷದ ಯುವತಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ಮಧ್ಯಾಹ್ನ ಕೇರಳದ ವಿಥುರಾದ ತವಕ್ಕಲ್ನಲ್ಲಿ ನಡೆದಿದೆ.

ತಿರುವನಂತಪುರಂನ ಕಮಲೇಶ್ವರಂ ಮೂಲದ ಅನುಪಮಾ (26) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಆಕೆ ಇಲ್ಲಿನ ಪ್ರಸಿದ್ಧ ಐಟಿ ಹಬ್ ಆದ ಟೆಕ್ನೋಪಾರ್ಕ್ನಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದರು.
ಗುರುವಾರ ಮಧ್ಯಾಹ್ನ ಅನುಪಮಾ ಅವರು ತಮ್ಮ ಸ್ನೇಹಿತರ ಗುಂಪಿನೊಂದಿಗೆ ವಿಥುರಾ ತವಕ್ಕಲ್ ವ್ಯಾಪ್ತಿಯ ನದಿಯ ದಂಡೆಯ ಬಳಿಯ ಮೆಟ್ಟಿಲುಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರ ಜೊತೆಯಲ್ಲಿದ್ದ ಸ್ನೇಹಿತೆಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ವೇಗವಾಗಿ ಹರಿಯುತ್ತಿದ್ದ ನದಿಯ ನೀರಿಗೆ ಬಿದ್ದಿದ್ದಾರೆ. ಇದನ್ನು ಕಂಡು ತಕ್ಷಣವೇ ಕಾರ್ಯಪ್ರವೃತ್ತರಾದ ಅನುಪಮಾ, ಸ್ನೇಹಿತೆಯನ್ನು ಹೇಗಾದರೂ ಮಾಡಿ ಬದುಕಿಸಬೇಕೆಂಬ ಉದ್ದೇಶದಿಂದ ನದಿಯ ನೀರಿಗೆ ಧುಮುಕಿದ್ದಾರೆ.
ನೀರಿಗೆ ಹಾರಿದ ಅನುಪಮಾ ಅವರು ಜಾರಿ ಬಿದ್ದಿದ್ದ ಯುವತಿಯನ್ನು ಪ್ರವಾಹದಿಂದ ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ತದನಂತರ ಅಲ್ಲಿದ್ದ ಇತರ ಸ್ನೇಹಿತರು ನದಿಗೆ ಬಿದ್ದಿದ್ದ ಯುವತಿಯನ್ನು ನೀರಿನಿಂದ ಮೇಲಕ್ಕೆ ಎಳೆದು ರಕ್ಷಿಸಿದ್ದಾರೆ. ಆದರೆ, ಅಷ್ಟರಲ್ಲೇ ನದಿಯಲ್ಲಿದ್ದ ಭಾರಿ ಪ್ರಮಾಣದ ನೀರಿನ ಸೆಳೆತ ಹಾಗೂ ಪ್ರವಾಹದ ವೇಗಕ್ಕೆ ಸಿಲುಕಿದ ಅನುಪಮಾ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.
ಘಟನಾ ಸ್ಥಳದ ಸಮೀಪದಲ್ಲೇ ಕೆಲಸ ಮಾಡುತ್ತಿದ್ದ ಕೆಲವು ವಲಸೆ ಕಾರ್ಮಿಕರು ಯುವತಿಯರ ಕಿರುಚಾಟವನ್ನು ಕೇಳಿ ತಕ್ಷಣವೇ ನದಿಯ ಬಳಿಗೆ ಧಾವಿಸಿದ್ದಾರೆ. ಅವರು ನದಿಯ ಆಳಕ್ಕೆ ಇಳಿದು ತೀವ್ರ ಹುಡುಕಾಟ ನಡೆಸಿ ಕೊನೆಗೂ ಅನುಪಮಾ ಅವರನ್ನು ನೀರಿನಿಂದ ಹೊರತೆಗೆದಿದ್ದಾರೆ. ತಕ್ಷಣವೇ ಆಕೆಯನ್ನು ವಿಥುರ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಸ್ನೇಹಿತೆಯ ಪ್ರಾಣ ರಕ್ಷಿಸಲು ಹೋಗಿ ಯುವತಿ ತನ್ನ ಪ್ರಾಣವನ್ನೆ ಬಿಟ್ಟಿದ್ದಾಳೆ.