ಕಾಸರಗೋಡು: ತ್ರಿಕ್ಕರಿಪುರ ಶಾಸಕ ಸಂದೀಪ್ ವಾರಿಯರ್ ಕಾರಿನ ಟೈರ್ ಸ್ಫೋಟ – ಪವಾಡಸಾದೃಶ ರೀತಿಯಲ್ಲಿ ಜೀವಾಪಾಯದಿಂದ ಪಾರು!

ಕಾಸರಗೋಡು,: ತ್ರಿಕ್ಕರಿಪುರ ಶಾಸಕ ಸಂದೀಪ್ ವಾರಿಯರ್ ಪ್ರಯಾಣಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಶಾಸಕರು ಸೇರಿದಂತೆ ಎಲ್ಲರೂ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಮುಂಜಾನೆ ಸುಮಾರು 2 ಗಂಟೆಯ ವೇಳೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಲಪ್ಪುರಂನ ಕೋಝಿಚ್ಚೇನ ಬಳಿ ಅಪಘಾತ ಸಂಭವಿಸಿದೆ.
ಶಾಸಕ ಸಂದೀಪ್ ವಾರಿಯರ್ ಅವರು ತ್ರಿಕ್ಕರಿಪುರದಿಂದ ತಮ್ಮ ಊರಾದ ಚೇತ್ತಲ್ಲೂರಿಗೆ ಹಿಂದಿರುಗುತ್ತಿದ್ದ ವೇಳೆ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿದೆ.
ಶಾಸಕರ ಕಾರಿನ ಹಿಂದೆ ಬರುತ್ತಿದ್ದ ಇನ್ನೆರಡು ಕಾರುಗಳೂ ಪರಸ್ಪರ ಢಿಕ್ಕಿಯಾಗಿವೆ. ಆ ಕಾರುಗಳಲ್ಲಿದ್ದ ಕುಟುಂಬದ ಸದಸ್ಯರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಅಸ್ತವ್ಯಸ್ತಗೊಂಡಿದ್ದ ವಾಹನ ಸಂಚಾರವನ್ನು ಸುಗಮಗೊಳಿಸಿದರು. ಬಳಿಕ ಶಾಸಕ ಸಂದೀಪ್ ವಾರಿಯರ್ ಮತ್ತು ಅವರ ತಂಡ ಮತ್ತೊಂದು ಕಾರಿನಲ್ಲಿ ಪ್ರಯಾಣ ಮುಂದುವರಿಸಿತು.
