ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹ*ತ್ಯೆ: ಪರೀಕ್ಷಾ ಹಾಲ್‌ನ ಸಿಸಿಟಿವಿ ದೃಶ್ಯಾವಳಿ ಲಭ್ಯ

ಮುಂಬೈ: ಐಐಟಿ ಬಾಂಬೆಯ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ಹೊರಬಿದ್ದಿದೆ. ಸಾಹಿಲ್ ಸಾವನ್ನಪ್ಪುವ ಕೆಲವೇ ಗಂಟೆಗಳ ಮೊದಲು ಪರೀಕ್ಷಾ ಕೊಠಡಿಯಲ್ಲಿ ನಡೆದ ವಿದ್ಯಮಾನಗಳ ಸಿಸಿಟಿವಿ (CCTV) ದೃಶ್ಯಾವಳಿಗಳು ಲಭ್ಯವಾಗಿದ್ದು, ಪೊಲೀಸರ ತನಿಖೆಗೆ ಇದು ಪ್ರಮುಖ ಸಾಕ್ಷ್ಯವಾಗಿ ಪರಿಣಮಿಸಿದೆ.
ಸಿಸಿಟಿವಿ ದೃಶ್ಯದಲ್ಲೇನಿದೆ?
ಸೆಪ್ಟೆಂಬರ್ 18 ರಂದು ನಡೆದ ಮಧ್ಯಂತರ ಸೆಮಿಸ್ಟರ್ ಪರೀಕ್ಷೆಯ ವೇಳೆ ಕಪ್ಪು ಟಿ-ಶರ್ಟ್ ಧರಿಸಿದ್ದ ಸಾಹಿಲ್ ಮುಂಬದಿಯ ಬೆಂಚ್‌ನಲ್ಲಿ ಕುಳಿತಿದ್ದ. ಈ ವೇಳೆ ಮೇಲ್ವಿಚಾರಕರಾಗಿದ್ದ ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಅವರು ಆತನ ಬಳಿ ಬಂದು ಮಾತನಾಡುತ್ತಾರೆ. ಸಾಹಿಲ್ ಬೆಂಚ್‌ನಿಂದ ಎದ್ದು ಸ್ವಲ್ಪ ಹೊತ್ತು ಹಿಂದೆ ಕುಳಿತು, ನಂತರ ತನ್ನ ಮೊಬೈಲ್ ಫೋನ್ ಅನ್ನು ಪ್ರೊಫೆಸರ್‌ಗೆ ಹಸ್ತಾಂತರಿಸುವುದು ದೃಶ್ಯದಲ್ಲಿದೆ. ನಂತರ ಇಬ್ಬರ ನಡುವೆ ಕೆಲ ಕಾಲ ಸಂಭಾಷಣೆ ನಡೆಯುತ್ತದೆ. ಬಳಿಕ ಸಾಹಿಲ್ ತನ್ನ ಬ್ಯಾಗ್ ಹಾಗೂ ವಸ್ತುಗಳನ್ನು ತೆಗೆದುಕೊಂಡು ಪರೀಕ್ಷಾ ಹಾಲ್‌ನಿಂದ ಹೊರನಡೆಯುತ್ತಾನೆ. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸಾಹಿಲ್ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ.
ತನಿಖೆಯ ಕೇಂದ್ರಬಿಂದುವಾದ ಕೊನೆಯ 20 ನಿಮಿಷ
ಪರೀಕ್ಷಾ ಹಾಲ್‌ನಲ್ಲಿ ಮೇಲ್ವಿಚಾರಕರು ಮತ್ತು ವಿದ್ಯಾರ್ಥಿಯ ನಡುವೆ ವಾಸ್ತವವಾಗಿ ಏನು ಮಾತುಕತೆ ನಡೆಯಿತು? ಕೊನೆಯ 20 ನಿಮಿಷಗಳಲ್ಲಿ ವಿದ್ಯಾರ್ಥಿಯನ್ನು ತೀವ್ರ ಅವಮಾನಕ್ಕೆ ಗುರಿಪಡಿಸಲಾಯಿತೇ ಅಥವಾ ಮಾನಸಿಕವಾಗಿ ಕುಗ್ಗುವಂತೆ ಮಾಡಲಾಯಿತೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಕೂಲಂಕುಷವಾಗಿ ವಿಶ್ಲೇಷಿಸುತ್ತಿದ್ದಾರೆ.
ಪೋಷಕರ ಕಣ್ಣೀರು ಮತ್ತು ಜಾತಿ ತಾರತಮ್ಯದ ಆರೋಪ:
ಸಾಹಿಲ್ ತಂದೆ ರವೀಂದ್ರ ವಕೋಡ್ ಹಾಗೂ ತಾಯಿ ಸೋನಾಲಿ ಅವರು ಪ್ರೊಫೆಸರ್ ದೂಲ್ಲಾ ವಿರುದ್ಧ ಗಂಭೀರ ಜಾತಿನಿಂದನೆ ಆರೋಪ ಮುಂದುವರೆಸಿದ್ದಾರೆ. “ಮಗನಿಗೆ ಸಂಸ್ಥೆಯಲ್ಲಿ ನಿರಂತರ ತಾರತಮ್ಯ ಮತ್ತು ಕಿರುಕುಳವಿತ್ತು. ಪ್ರವೇಶ ಪಡೆಯುವುದು ಕಷ್ಟ, ಸಹಿಸಿಕೊ ಎಂದು ನಾನು ಮಗನಿಗೆ ಸಮಾಧಾನ ಹೇಳಿದ್ದೆ. ಪ್ರೊಫೆಸರ್ ದೂಲ್ಲಾ ನನ್ನ ಮಗನ ಸಾವಿಗೆ ನೇರ ಹೊಣೆ, ಅವರನ್ನು ತಕ್ಷಣ ಬಂಧಿಸಬೇಕು” ಎಂದು ತಂದೆ ಆಗ್ರಹಿಸಿದ್ದಾರೆ. ಮುಂಬೈ ಪೊಲೀಸರು ಈಗಾಗಲೇ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.ಅಧ್ಯಾಪಕರ ಸಮರ್ಥನೆ ಮತ್ತು ಆಡಳಿತದ ಕ್ರಮ:
ಇನ್ನೊಂದೆಡೆ ಐಐಟಿ ಬಾಂಬೆಯ ಫ್ಯಾಕಲ್ಟಿ ಫೋರಂ ಮುಖ್ಯಸ್ಥ ಪ್ರೊ. ರಾಜ್‌ಕುಮಾರ್ ಪಂತ್ ಅವರು ಆರೋಪಿ ಪ್ರೊಫೆಸರ್ ಪರ ನಿಂತಿದ್ದಾರೆ. “ವಿದ್ಯಾರ್ಥಿ ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ತಪ್ಪು ಮಾಡಿದ್ದ. ಪ್ರೊಫೆಸರ್ ಕೇವಲ ನಿಯಮ ಪಾಲಿಸಿ ವಿಭಾಗದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ. ಕರ್ತವ್ಯ ನಿರ್ವಹಿಸಿದ್ದಕ್ಕೆ ಪ್ರಾಧ್ಯಾಪಕರನ್ನು ಹೊಣೆಗಾರರನ್ನಾಗಿ ಮಾಡಿದರೆ ಶಿಕ್ಷಕ ಸಮುದಾಯ ಕೆಲಸ ಮಾಡುವುದು ಕಷ್ಟವಾಗುತ್ತದೆ” ಎಂದು ವಾದಿಸಿದ್ದಾರೆ. ಆದಾಗ್ಯೂ, ವಿದ್ಯಾರ್ಥಿಗಳ ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರೊ. ದೂಲ್ಲಾ ಅವರನ್ನು ಡೀನ್ ಹುದ್ದೆಯಿಂದ ವಜಾಗೊಳಿಸಿ, ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ.ಮೊಬೈಲ್ ಮತ್ತು ಡಿಜಿಟಲ್ ಫೋರೆನ್ಸಿಕ್: ಪರೀಕ್ಷಾ ಹಾಲ್‌ನಲ್ಲಿ ಜಪ್ತಿ ಮಾಡಲಾದ ಸಾಹಿಲ್‌ನ ಮೊಬೈಲ್ ಫೋನ್ ಅನ್ನು ಪೊಲೀಸರು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಶ್ನೆಪತ್ರಿಕೆಯನ್ನು ಚಾಟ್‌ಜಿಪಿಟಿಗೆ (ChatGPT) ಅಪ್‌ಲೋಡ್ ಮಾಡಲಾಗಿದೆಯೇ ಅಥವಾ ಕೇವಲ ಕರೆ/ಮೆಸೇಜ್ ಮಾಡಲಾಗಿದೆಯೇ ಎಂಬ ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ.
ತನಿಖಾಧಿಕಾರಿಗಳಿಂದ ಸಹಪಾಠಿಗಳ ವಿಚಾರಣೆ: ಪರೀಕ್ಷಾ ಕೊಠಡಿಯಲ್ಲಿದ್ದ ಇತರೆ ವಿದ್ಯಾರ್ಥಿಗಳು ಮತ್ತು ಪಕ್ಕದ ಡೆಸ್ಕ್‌ನಲ್ಲಿದ್ದ ವಿದ್ಯಾರ್ಥಿಗಳಿಂದ ಪೊಲೀಸರು ಪ್ರತ್ಯೇಕ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಪ್ರೊಫೆಸರ್ ಬಳಸಿದ ಭಾಷೆ ಅಥವಾ ವರ್ತನೆ ಹೇಗಿತ್ತು ಎಂಬುದನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗಲಿದೆ.
ಶೈಕ್ಷಣಿಕ ನೀತಿ ಮತ್ತು ಮಾನಸಿಕ ಆರೋಗ್ಯ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರೀಕ್ಷಾ ಅಕ್ರಮಗಳನ್ನು ನಿಭಾಯಿಸುವಾಗ ವಿದ್ಯಾರ್ಥಿಗಳನ್ನು ಸಾರ್ವಜನಿಕವಾಗಿ ಅವಮಾನಿಸದೆ, ಪ್ರತ್ಯೇಕ ಕೌನ್ಸೆಲಿಂಗ್ ಮೂಲಕ ನಿಯಮಾನುಸಾರ ಕ್ರಮ ಕೈಗೊಳ್ಳುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ರೂಪಿಸಬೇಕೆಂಬ ಒತ್ತಾಯ ಶಿಕ್ಷಣ ತಜ್ಞರಿಂದ ಕೇಳಿಬರುತ್ತಿದೆ.
