Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೊಸಪೇಟೆ: ಜೂನ್ 25ಕ್ಕೆ ತುಂಗಭದ್ರಾ ಡ್ಯಾಂ ಹೊಸ ಕ್ರೆಸ್ಟ್ ಗೇಟ್ ಉದ್ಘಾಟನೆ; ಮೂರು ರಾಜ್ಯಗಳ ಸಿಎಂಗಳ ಭೇಟಿ!

Spread the love

ಹೊಸಪೇಟೆ: ತುಂಗಭದ್ರಾ ಜಲಾಶಯದ ಇತಿಹಾಸದಲ್ಲೇ ಅತ್ಯಂತ ಪ್ರಮುಖವಾದ ನೂತನ ಕ್ರೆಸ್ಟ್ ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮುನಿರಾಬಾದ್ ಸಜ್ಜಾಗುತ್ತಿದೆ.

ಬರುವ ಜೂನ್ 25ರಂದು ನಡೆಯಲಿರುವ ಈ ಐತಿಹಾಸಿಕ ಸಮಾರಂಭದಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.

2024ರ ಆಗಸ್ಟ್ 10ರಂದು ತುಂಗಭದ್ರಾ ಅಣೆಕಟ್ಟಿನ 19ನೇ ಕ್ರೆಸ್ಟ್ ಗೇಟ್‌ನ ಸರಪಳಿ ತುಂಡಾಗಿ ಭದ್ರತಾ ಆತಂಕ ಸೃಷ್ಟಿಯಾಗಿತ್ತು. ಈ ಘಟನೆಯ ಬಳಿಕ ತಜ್ಞರ ಸಲಹೆಯಂತೆ ಅಣೆಕಟ್ಟಿನ ಎಲ್ಲಾ 33 ಕ್ರೆಸ್ಟ್ ಗೇಟ್‌ಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಸರಪಳಿ ವ್ಯವಸ್ಥೆಯನ್ನು ಬದಲಿಸಿ ಆಧುನೀಕರಿಸುವ ಮಹತ್ವದ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು.

ಸುಮಾರು 57.8 ಕೋಟಿ ರೂ.ವೆಚ್ಚದ ಈ ಯೋಜನೆಯಲ್ಲಿ 52 ಕೋಟಿ ರೂ. ಕ್ರೆಸ್ಟ್ ಗೇಟ್‌ಗಳ ಆಧುನೀಕರಣಕ್ಕೆ ಹಾಗೂ 5.8 ಕೋಟಿ ರೂ. ಸರಪಳಿ ಬದಲಾವಣೆಗೆ ಮೀಸಲಿಡಲಾಗಿತ್ತು. ಅಣೆಕಟ್ಟಿನ ಇತಿಹಾಸದಲ್ಲೇ ಇದು ಮೊದಲ ಬಾರಿಗೆ ಕೈಗೊಂಡಿರುವ ಸಮಗ್ರ ಆಧುನೀಕರಣ ಕಾಮಗಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತುಂಗಭದ್ರಾ ಅಣೆಕಟ್ಟು ಮಂಡಳಿಯ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ ಅವರು ಮಾತನಾಡಿ, ಗೇಟ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ಸರಪಳಿ ಬದಲಾವಣೆ ಕಾರ್ಯ ಅಂತಿಮ ಹಂತದಲ್ಲಿದೆ. ಜೂನ್ 25ರಂದು ಉದ್ಘಾಟನಾ ಕಾರ್ಯಕ್ರಮ ನಡೆಸುವ ಕುರಿತು ಕೇಂದ್ರ ಸರ್ಕಾರದಿಂದ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕಾಗಿ ಅಣೆಕಟ್ಟಿನ ಆವರಣದಲ್ಲಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡುವ ಕಾರ್ಯ ನಡೆಯುತ್ತಿದೆ. ಮುನಿರಾಬಾದ್ ನೀರಾವರಿ ಕಚೇರಿ ಬಳಿಯ ಎಡದಂಡೆ ಪ್ರದೇಶ ಅಥವಾ ತುಂಗಭದ್ರಾ ಮಂಡಳಿ ಕಚೇರಿ ಬಳಿಯ ಬಲದಂಡೆ ಪ್ರದೇಶದಲ್ಲಿ ಸಮಾರಂಭ ನಡೆಸುವ ಕುರಿತು ಚರ್ಚೆ ನಡೆಯುತ್ತಿದೆ. ಹೆಲಿಕಾಪ್ಟರ್ ಇಳಿಯುವ ವ್ಯವಸ್ಥೆ ಹಾಗೂ ವಿಐಪಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಮೂರು ರಾಜ್ಯಗಳ ಜೀವನಾಡಿಯೆಂದೇ ಪರಿಗಣಿಸಲ್ಪಡುವ ತುಂಗಭದ್ರಾ ಅಣೆಕಟ್ಟು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಲಕ್ಷಾಂತರ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ.

ಕರ್ನಾಟಕದ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳು, ಆಂಧ್ರಪ್ರದೇಶದ ಅನಂತಪುರ, ಕರ್ನೂಲ್ ಹಾಗೂ ಕಡಪ ಜಿಲ್ಲೆಗಳು, ಜೊತೆಗೆ ತೆಲಂಗಾಣದ ಕೆಲವು ಭಾಗಗಳು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಿವೆ.

ಈಗಾಗಲೇ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಮ್ಮತಿ ಸೂಚಿಸಿರುವುದಾಗಿ ತಿಳಿದುಬಂದಿದೆ. ಕರ್ನಾಟಕ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಅಂತಿಮ ದೃಢೀಕರಣಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಹಿಂದಿನ ಹಂಗಾಮಿನಲ್ಲಿ ನೀರಿನ ಕೊರತೆಯಿಂದ ಸಂಕಷ್ಟ ಅನುಭವಿಸಿದ್ದ ರೈತರು, ಆಧುನೀಕರಣ ಕಾಮಗಾರಿ ಪೂರ್ಣಗೊಂಡಿರುವುದರಿಂದ ಈ ಬಾರಿ ನೀರಿನ ಸಂಗ್ರಹಣೆ ಮತ್ತು ಪೂರೈಕೆ ಮತ್ತಷ್ಟು ಸುರಕ್ಷಿತವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *