ಹಿಮಾಚಲ ಪ್ರದೇಶ: ವಾಹನದ ಮೇಲೆ ಉರುಳಿಬಿದ್ದ ಬೃಹತ್ ಬಂಡೆ; 13 ಮಂದಿ ಸಾ*ವು!

ಶಿಮ್ಲಾ : ಹಿಮಾಚಲ ಪ್ರದೇಶದ ದುರ್ಗಮ ಬುಡಕಟ್ಟು ಜಿಲ್ಲೆಯಾದ ಲಾಹೌಲ್-ಸ್ಪಿಟಿಯಲ್ಲಿ ಶುಕ್ರವಾರ ಅತ್ಯಂತ ನಡುಕ ಹುಟ್ಟಿಸುವ ರಸ್ತೆ ಅಪಘಾತ ಸಂಭವಿಸಿದೆ. ಉದಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಧುನಾಲಾ-ರಾಹೌಲಿ ಬಳಿ ಬಿಆರ್ಒ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ಟಾಟಾ ಸುಮೋ ವಾಹನದ ಮೇಲೆ ಬೆಟ್ಟದಿಂದ ಬೃಹತ್ ಬಂಡೆ ಉರುಳಿಬಿದ್ದ ಪರಿಣಾಮ 13 ಜನರು ಸಜೀವವಾಗಿ ನಜ್ಜುಗುಜ್ಜಾಗಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಾಲಕ ಬೀರ್ ಸಿಂಗ್ ಸೇರಿ ಒಟ್ಟು 15 ಮಂದಿ ಪ್ರಯಾಣಿಕರಿದ್ದ ಟಾಟಾ ಸುಮೋ ವಾಹನವು ಕುಲ್ಲುವಿನಿಂದ ಚಂಬಾ ಜಿಲ್ಲೆಯ ಪಂಗಿಗೆ ಪ್ರಯಾಣಿಸುತ್ತಿತ್ತು. ಕಧುನಾಲಾ ಪ್ರದೇಶದ ರಾಹೌಲಿ ತಲುಪುತ್ತಿದ್ದಂತೆ ಬೆಟ್ಟದ ಇಳಿಜಾರಿನಿಂದ ಬೃಹತ್ ಭೂಕುಸಿತ ಸಂಭವಿಸಿ, ಬಂಡೆಯ ದೊಡ್ಡ ಭಾಗ ಮುರಿದು ನೇರವಾಗಿ ವಾಹನದ ಮೇಲೆಯೇ ಬಿದ್ದಿದೆ. ಬಂಡೆ ಬಿದ್ದ ರಭಸಕ್ಕೆ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಹುತೇಕ ಪ್ರಯಾಣಿಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಲಾಹೌಲ್ನ ಟಿಂಡಿ ಹಾಗೂ ಉದಯಪುರ ಪೊಲೀಸ್ ಠಾಣೆಯ ಸಿಬ್ಬಂದಿ, ಜಿಲ್ಲಾಡಳಿತ ಮತ್ತು ಸ್ಥಳೀಯ ನಿವಾಸಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸಿ ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಮಾಹಿತಿ ನೀಡಿರುವ ಲಾಹೌಲ್-ಸ್ಪಿಟಿ ಉಪ ಆಯುಕ್ತ (DC) ಕಿರಣ್ ಭದಾನಾ, “ಅಪಘಾತದಲ್ಲಿ 13 ಜನರು ಮೃತಪಟ್ಟಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಮೃತರೆಲ್ಲರೂ ಚಂಬಾ ಜಿಲ್ಲೆಯ ಪಂಗಿ ಪ್ರದೇಶದ ನಿವಾಸಿಗಳು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಮೃತರ ಗುರುತು ಪತ್ತೆ ಹಚ್ಚುವ ಪ್ರಕ್ರಿಯೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು” ಎಂದು ತಿಳಿಸಿದ್ದಾರೆ.