ಹಾವೇರಿ: ರಾಣೇಬೆನ್ನೂರು ಬಳಿ ಕಾಲು ಜಾರಿ ಕೆರೆಗೆ ಬಿದ್ದು 70 ವರ್ಷದ ವೃದ್ಧೆ ದಾರುಣ ಸಾ*ವು!

ಹಾವೇರಿ: ಕೈ, ಕಾಲು ಮತ್ತು ಮುಖ ತೊಳೆಯಲು ಕೆರೆಯ ಬಳಿ ತೆರಳಿದ್ದ ವೃದ್ಧೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ರಾಣೇಬೆನ್ನೂರು ತಾಲೂಕಿನ ಹೊನ್ನತ್ತಿ ಗ್ರಾಮದಲ್ಲಿ ನಡೆದಿದೆ.
ಮೃತ ವೃದ್ಧೆಯನ್ನು 70 ವರ್ಷದ ಪ್ರೇಮಿಲವ್ವ ಸಾವಕ್ಕನವರ ಎಂದು ಗುರುತಿಸಲಾಗಿದೆ. ಮೃತ ಪ್ರೇಮಿಲವೂ ಮೂಲತಃ ಬ್ಯಾಡಗಿ ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದ ನಿವಾಸಿಯಾಗಿದ್ದು ಸದ್ಯ ಹರಿಹರದಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಶ್ರೀ ಹೊನ್ನಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪ್ರೇಮಿಲವ್ವ ದೇವಸ್ಥಾನದ ಸಮೀಪದ ಕೆರೆಯ ಬಳಿ ಕೈ, ಕಾಲು ಹಾಗೂ ಮುಖ ತೊಳೆಯಲು ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
