ಗುರುವಾಯೂರು: ಚಿಂಗಮ್ ಮಾಸದ ಮೊದಲ ಭಾನುವಾರ ದಾಖಲೆ ಸಂಖ್ಯೆಯ ವಿವಾಹ; ಕೇವಲ 7 ಗಂಟೆಯಲ್ಲಿ 416 ಜೋಡಿಗಳು ದಾಂಪತ್ಯ ಜೀವನಕ್ಕೆ!

ಗುರುವಾಯೂರು : ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ಮಲಯಾಳಂ ‘ಚಿಂಗಮ್’ ಮಾಸದ ಮೊದಲ ಭಾನುವಾರದಂದು ವಿವಾಹಗಳ ಭಾರಿ ಮಹಾ ದಾಖಲೆ ನಿರ್ಮಾಣವಾಗಿದೆ. ದೇವಾಲಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೇವಲ 7 ಗಂಟೆಗಳ ಕಾಲಾವಧಿಯಲ್ಲಿ 416 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದೇ ದೇವಾಲಯದಲ್ಲಿ ಕಳೆದ ಸೆಪ್ಟೆಂಬರ್ 8, 2024 ರಂದು ನಡೆದ 334 ವಿವಾಹಗಳು ಈವರೆಗಿನ ಗರಿಷ್ಠ ದಾಖಲೆಯಾಗಿತ್ತು. ಆದರೆ ಈ ಬಾರಿ ಸ್ಪಾಟ್ ಬುಕಿಂಗ್ ಸೇರಿದಂತೆ ಒಟ್ಟು 442 ವಿವಾಹಗಳು ನಿಗದಿಯಾಗಿದ್ದು, ಬೆಳಿಗ್ಗೆ 4.10 ರಿಂದ ಮಧ್ಯಾಹ್ನ 12.45 ರವರೆಗೆ (ಉಷ ಪೂಜೆ ಹಾಗೂ ಪಂಥೀರಡಿ ಪೂಜೆಯ ಅಲ್ಪಾವಧಿಯ ಹೊರತುಪಡಿಸಿ) ಒಟ್ಟು 416 ವಿವಾಹಗಳು ಯಶಸ್ವಿಯಾಗಿ ನೆರವೇರಿದವು.
ದೇವಸ್ವಂ ಅಧ್ಯಕ್ಷ ಎ.ವಿ. ಗೋಪಿನಾಥ್ ಅವರು ದೀಪ ಬೆಳಗಿಸುವ ಮೂಲಕ ಪೂರ್ವ ದ್ವಾರದ ಮೊದಲ ಮಂಟಪದಲ್ಲಿ ಕಲ್ಯಾಣ ಪ್ರಕ್ರಿಯೆಗೆ ಚಾಲನೆ ನೀಡಿದರು. ತಲಶ್ಶೇರಿಯ ಅರ್ಣವ್ ಮೋಹನ್ ಕುಮಾರ್ ಅವರು ಪಝಾಯಂಗಡಿಯ ವಿದ್ಯಾ ಆನಂದ್ ರಾಜ್ ಅವರಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ದಿನದ ಮದುವೆಗಳಿಗೆ ಶುಭಾರಂಭ ನೀಡಿದರು. ತದನಂತರ ಒಟ್ಟು 6 ವಿವಾಹ ಮಂಟಪಗಳಲ್ಲಿ ಸಾಲು ಸಾಲು ಮದುವೆಗಳು ಜರುಗಿದವು.
ವಿವಾಹಗಳ ಮಹಾಪೂರ ಹಾಗೂ ಭಕ್ತರ ದಂಡನ್ನು ನಿಯಂತ್ರಿಸಲು ಗುರುವಾಯೂರು ಎಸಿಪಿ ಸುರೇಂದ್ರನ್ ಮಂಗಾಟ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಸಿವಿಲ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಯಾವುದೇ ಅನಾಹುತಗಳು ಸಂಭವಿಸದಂತೆ ಅಗ್ನಿಶಾಮಕ ಅಧಿಕಾರಿ ಸಜಿತ್ ಲಾಲ್ ನೇತೃತ್ವದ ತಂಡ ಹಾಗೂ ದೇವಸ್ವಂ ಮಂಡಳಿಯ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು ಇಡೀ ಕಾರ್ಯಕ್ರಮವನ್ನು ಸುಸೂತ್ರವಾಗಿ ನಿರ್ವಹಿಸಿದರು.