ಶಾಲೆಯಲ್ಲಿ ಭೀಕರ ಹ*ಲ್ಲೆಗೊಳಗಾಗಿದ್ದ ಬಾಲಕಿ ಡಿಸ್ಚಾರ್ಜ್: ಮನೆಗೆ ಬಂದ ಕಂದಮ್ಮನಿಗೆ ಭಾವುಕ ಸ್ವಾಗತ!

ಚಂಡೀಗಢ/ಪಂಚಕುಲ : ಹರಿಯಾಣದ ಪಂಚಕುಲದ ಸರ್ಕಾರಿ ಶಾಲೆಯಲ್ಲಿ ಬಾಲಕನಿಂದ ಭೀಕರ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ 6 ವರ್ಷದ ಬಾಲಕಿ ಚಿಕಿತ್ಸೆಯ ಬಳಿಕ ಸಂಪೂರ್ಣ ಗುಣಮುಖಳಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾಳೆ. ಇದೀಗ ಮನೆಗೆ ಬಂದ ಪುಟ್ಟ ಕಂದಮ್ಮನಿಗೆ ಕುಟುಂಬಸ್ಥರು ಹಾಗೂ ಸ್ಥಳೀಯರು ಹೂವಿನ ಹಾರ ಹಾಕಿ, ಹೂಮಳೆ ಸುರಿಸಿ ಆತ್ಮೀಯ ಹಾಗೂ ಭಾವುಕ ಸ್ವಾಗತ ಕೋರಿದ್ದಾರೆ. ನೋವು ಹಾಗೂ ಭಯದ ದಿನಗಳನ್ನು ದಾಟಿ ಬಂದ ಮಗುವಿನ ಮುಖದಲ್ಲಿ ಮತ್ತೆ ನಗು ಮೂಡಿರುವ ಹೃದಯಸ್ಪರ್ಶಿ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಅಕ್ಟೋಬರ್ 28 ರಂದು ಶಾಲೆಯ ಮೊದಲ ಮಹಡಿಯ ತರಗತಿ ಕೊಠಡಿಯಲ್ಲಿ ಈ ಭೀಕರ ಕೃತ್ಯ ನಡೆದಿತ್ತು. ಬಾಲಕನು ಮೊದಲು ಈಕೆಯನ್ನು ‘ಹುಚ್ಚಿ’ ಎಂದು ಕರೆದು ರೇಗಿಸಿದ್ದನು. ಇದಕ್ಕೆ ಕೋಪಗೊಂಡ ಬಾಲಕಿ ಶಿಕ್ಷಕರಿಗೆ ದೂರು ನೀಡುವುದಾಗಿ ಹೇಳಿದ್ದಾಗ, “ನಿನ್ನ ತಂದೆ ಮೇಲಿನ ಮಹಡಿಯಲ್ಲಿದ್ದಾರೆ” ಎಂದು ಸುಳ್ಳು ಹೇಳಿ ಆಕೆಯನ್ನು ಮೇಲಕ್ಕೆ ಕರೆದೊಯ್ದಿದ್ದನು. ಬಳಿಕ ಬಾಲಕಿಯ ಕೂದಲು ಹಿಡಿದು ಡೆಸ್ಕ್/ಬೆಂಚಿಗೆ ಭೀಕರವಾಗಿ ತಲೆ ಗುದ್ದಿಸಿದ್ದನು. ಕಾಲಿನಿಂದ ಒದ್ದು, ಕಲ್ಲಿನ ಹೂವಿನ ಕುಂಡವನ್ನು ಎತ್ತಿ ಮುಖಕ್ಕೆ ಅಪ್ಪಳಿಸಿ ರಕ್ತದ ಮಡುವಿನಲ್ಲಿ ಬಿಟ್ಟು ಹೋಗಿದ್ದನು. ಅಷ್ಟಕ್ಕೇ ನಿಲ್ಲದೆ ಸುಮಾರು 30 ನಿಮಿಷಗಳ ಬಳಿಕ ಮತ್ತೆ ತರಗತಿಗೆ ಬಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವಿನ ಮೇಲೆ ಮತ್ತೆ ಹಲ್ಲೆ ನಡೆಸಿದ್ದನು. ಈ ಭೀಕರ ದೃಶ್ಯಾವಳಿಗಳು ಶಾಲೆಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ಘಟನೆಯ ತೀವ್ರತೆಯನ್ನು ಪರಿಗಣಿಸಿ ಕಾನೂನು ಮತ್ತು ಆಡಳಿತಾತ್ಮಕ ಮಟ್ಟದಲ್ಲಿ ಕಠಿಣ ಕ್ರಮ ಜರುಗಿಸಲಾಗಿದೆ. ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಹರಿಯಾಣ ಶಿಕ್ಷಣ ಇಲಾಖೆಯು ಜೆಬಿಟಿ (JBT) ಶಿಕ್ಷಕರಾದ ಸಿಮ್ರನ್ಜೀತ್ ಕೌರ್ ಮತ್ತು ಪೂಜಾ ರಾಣಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯ ವಿರುದ್ಧ ಒಂದು ಹಾಗೂ ಹಲ್ಲೆ ನಡೆಸಿದ ಆರೋಪಿ ಬಾಲಕನ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಇದೀಗ ಸಾವನ್ನು ಗೆದ್ದು ಬಾಲಕಿ ಮರಳಿ ಮನೆಗೆ ಬಂದಿದ್ದಾಳೆ.