ಐಪಿಎಲ್ನಲ್ಲಿ ಗೌತಮ್ ಗಂಭೀರ್ ಪ್ರತ್ಯಕ್ಷ: ಆಯ್ಕೆದಾರ ಆರ್.ಪಿ. ಸಿಂಗ್ ಜೊತೆ ಸುದೀರ್ಘ ಚರ್ಚೆ.

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಶುಕ್ರವಾರ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯವನ್ನು ವೀಕ್ಷಿಸಿದರು. ಆಯ್ಕೆದಾರ ಆರ್.ಪಿ. ಸಿಂಗ್ ಅವರ ಪಕ್ಕ ಕುಳಿತು ಪಂದ್ಯ ವೀಕ್ಷಿಸಿದ ಅವರು, ಪಂದ್ಯದುದ್ದಕ್ಕೂ ಸುಧೀರ್ಘ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂತು. ಜೊತೆಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರ ಜತೆಯೂ ಅವರು ಮಾತುಕತೆ ನಡೆಸಿದರು.
ಕೆಕೆಆರ್ ತಂಡಕ್ಕೆ 2024ರವರೆಗೆ ಮೆಂಟರ್ ಆಗಿದ್ದ ಗಂಭೀರ್, ಆ ಬಳಿಕ ಐಪಿಎಲ್ ಪಂದ್ಯ ವೀಕ್ಷಿಸಲು ಆಗಮಿಸಿದ್ದು ಇದೇ ಮೊದಲು. 2024ರಲ್ಲಿ ಕೆಕೆಆರ್ ತಂಡ ಮೂರನೇ ಬಾರಿ ಪ್ರಶಸ್ತಿ ಜಯಿಸಿತ್ತು. ಬಿಸಿಸಿಐ ಆಯ್ಕೆದಾರರು ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಗಳಿಗೆ ಹಾಜರಾಗಿ, ಉದಯೋನ್ಮುಖ ಆಟಗಾರರ ಸಾಮರ್ಥ್ಯವನ್ನು ಪರಿಶೀಲಿಸುತ್ತಿದ್ದಾರೆ. ಪಂದ್ಯದಲ್ಲಿ ಗಂಭೀರ್ ಉಪಸ್ಥಿತಿ ಅಭಿಮಾನಿಗಳ ಗಮನ ಸೆಳೆಯಿತು.

ಗಂಭೀರ್ 2024ರಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗುವ ಮುನ್ನ ಕೆಕೆಆರ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಪಂದ್ಯದಲ್ಲಿ ಪಥುಮ್ ನಿಸಾಂಕ ಅರ್ಧಶತಕ ಗಳಿಸಿದರೂ, ಕೆಕೆಆರ್ ಸ್ಪಿನ್ನರ್ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 142 ರನ್ಗಳಿಗೆ ನಿಯಂತ್ರಿಸಿದರು. ಡೆಲ್ಲಿ ಭರ್ಜರಿ ಆರಂಭ ಪಡೆದಿದ್ದರೂ, ಮಧ್ಯದ ಓವರ್ಗಳಲ್ಲಿ ಅನುಕೂಲ್ ರಾಯ್ (2/31), ಸುನೀಲ್ ನರೈನ್ (1/17) ಮತ್ತು ವರುಣ್ ಚಕ್ರವರ್ತಿ (0/28) ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಶುತೋಶ್ ಶರ್ಮಾ 28 ಎಸೆತಗಳಲ್ಲಿ 39 ರನ್ ಗಳಿಸದೇ ಇದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ಇನ್ನಷ್ಟು ಅಲ್ಪಮೊತ್ತಕ್ಕೆ ಕುಸಿಯುತ್ತಿತ್ತು. ಕೆಕೆಆರ್ ಕೇವಲ 14.2 ಓವರ್ಗಳಲ್ಲಿ ಗೆಲುವಿನ ಗುರಿ ತಲುಪಿತು.