17 ತಿಂಗಳು ಜೈಲಿನಲ್ಲಿದ್ದು ಬಂದವನಿಗೆ ಹೂವಿನ ಹಾರ!: ಕಾನೂನು ವಿದ್ಯಾರ್ಥಿನಿ ಅತ್ಯಾಚಾರಿ ಸುಶೀಲ್ ಪ್ರಜಾಪತಿ ಅದ್ಧೂರಿ ಬಿಡುಗಡೆ!

ಗಾಜಿಯಾಬಾದ್: ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಆತನಿಗೆ ಅದ್ಧೂರಿ ಸ್ವಾಗತ ಕೋರಿ, ಹೂವಿನ ಹಾರ ಹಾಕಿ ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿಯನ್ನು ಹಿಂದೂ ಯುವ ವಾಹಿನಿಯ ಮಾಜಿ ಸದಸ್ಯ ಸುಶೀಲ್ ಪ್ರಜಾಪತಿ ಎಂದು ಗುರುತಿಸಲಾಗಿದೆ. ಕಾನೂನು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸುಮಾರು 17 ತಿಂಗಳು ಜೈಲಿನಲ್ಲಿದ್ದ ಸುಶೀಲ್ ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆತ ಜೈಲಿನಿಂದ ಹೊರಬರುತ್ತಿದ್ದಂತೆ ಬೆಂಬಲಿಗರು ಭವ್ಯ ಸ್ವಾಗತ ಕೋರಿದ್ದಾರೆ.

ಅಲ್ಲದೆ ಆರೋಪಿ ಬಿಳಿ ಬಣ್ಣದ ಉಡುಪು ಧರಿಸಿದ್ದು, ಬೆಂಬಲಿಗರು ಆತನಿಗೆ ಚೆಂಡು ಹೂವಿನ ಹಾರಗಳನ್ನು ಹಾಕಿ, ಘೋಷಣೆಗಳನ್ನು ಕೂಗುತ್ತಾ ಆತನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದ್ದಾರೆ. ಈ ವೇಳೆ ಆರೋಪಿ ಗೆಲುವಿನ ಸಂಕೇತ ಪ್ರದರ್ಶಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಅತ್ಯಾಚಾರದಂತಹ ಗಂಭೀರ ಆರೋಪ ಹೊತ್ತಿರುವ ವ್ಯಕ್ತಿಗೆ ಹೀಗೆ ಹೀರೊ ಮಾದರಿಯಲ್ಲಿ ಸ್ವಾಗತ ಕೋರಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.