Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಲಂಡನ್: ‘Taiwan Travelogue’ ಕಾದಂಬರಿಗೆ 2026ರ ಸಾಲಿನ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ!

Spread the love

ಲಂಡನ್: ತೈವಾನಿನ ಆಹಾರ ಸಂಸ್ಕೃತಿ ಹಾಗೂ ಇಬ್ಬರು ಮಹಿಳೆಯರ ನಡುವಿನ ಪ್ರೇಮ ಕಥೆಯನ್ನು ಆಧರಿಸಿದ ‘Taiwan Travelogue’ ಕಾದಂಬರಿಗೆ 2026ನೇ ಸಾಲಿನ ಅಂತರರಾಷ್ಟ್ರೀಯ ಬೂಕ‌ರ್ ಪ್ರಶಸ್ತಿ ಲಭಿಸಿದೆ.
ತೈವಾನಿನ ಲೇಖಕ ಯಾಂಗ್ ಶುವಾಂಗ್-ಝಿ ಬರೆದಿರುವ ಈ ಕಾದಂಬರಿಯನ್ನು ಲಿನ್ ಕಿಂಗ್ ಅವರು ಮ್ಯಾಂಡರಿನ್ ಚೈನೀಸ್ ಭಾಷೆಯಿಂದ ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ. ಕೃತಿಯಲ್ಲಿ ಮುನ್ನುಡಿ, ಟಿಪ್ಪಣಿಗಳು ಮತ್ತು ಅನುವಾದಕರ ವಿವರಣೆಗಳನ್ನೂ ಸೇರಿಸಲಾಗಿದೆ.
ಕಾದಂಬರಿಯ ಕಥೆ 1938ರ ಕಾಲಘಟ್ಟದಲ್ಲಿ ನಡೆಯುತ್ತದೆ. ಜಪಾನಿನ ಲೇಖಕಿ ಅಯೋಮಾ ಚಿಝುಕೊ ಸರಕಾರಿ ಪ್ರಾಯೋಜಿತ ಪ್ರವಾಸದ ಭಾಗವಾಗಿ ತೈವಾನ್‌ಗೆ ಭೇಟಿ ನೀಡುತ್ತಾಳೆ. ಆದರೆ ಅಧಿಕೃತ ಕಾರ್ಯಕ್ರಮಗಳಿಗಿಂತ ತೈವಾನ್‌ನ ಆಹಾರ ಸಂಸ್ಕೃತಿಯೇ ಆಕೆಯನ್ನು ಹೆಚ್ಚು ಸೆಳೆಯುತ್ತದೆ. ಹೀಗಾಗಿ ವಿವಿಧ ಆಹಾರಗಳ ಮೂಲಕ ತೈವಾನ್ ನನ್ನು ಅರಿಯಲು ಆಕೆ ಪ್ರಯತ್ನಿಸುತ್ತಾಳೆ.

ಈ ವೇಳೆ ಚಿಝುಕೊಗೆ ತೈವಾನೀಸ್ ಮಹಿಳೆ ಚಿಜುರು ಪರಿಚಯವಾಗುತ್ತಾಳೆ. ಚಿಝುರು ಆಕೆಯ ಭಾಷಾಂತರಕಾರ್ತಿಯಾಗಿಯೂ, ವಿಶಿಷ್ಟ ಅಡುಗೆಗಾರ್ತಿಯಾಗಿಯೂ ನೆರವಾಗುತ್ತಾಳೆ. ಕಾಲಕ್ರಮೇಣ ಚಿಝುಕೊ ಚಿಝುರನ್ನು ತೀವ್ರವಾಗಿ ಪ್ರೀತಿಸಲು ಆರಂಭಿಸುತ್ತಾಳೆ. ತನ್ನ ನಿಶ್ಚಿತಾರ್ಥವನ್ನೇ ಮುರಿಯಲು ಮುಂದಾಗುವಷ್ಟು ಆ ಪ್ರೀತಿ ಗಾಢವಾಗುತ್ತದೆ. ಆದರೆ ಚಿಝುರು ಭಾವನಾತ್ಮಕ ಅಂತರ ಕಾಯ್ದುಕೊಳ್ಳುತ್ತಾಳೆ. ಚಿಝುಕೊ ಪ್ರೀತಿಗೆ ಆಕೆ ಸ್ಪಂದಿಸುತ್ತಾಳೆಯೇ ಎಂಬ ಪ್ರಶ್ನೆಯೇ ಕಾದಂಬರಿಯ ಪ್ರಮುಖ ಕುತೂಹಲವಾಗಿದೆ.
ವಿಭಿನ್ನ ಸಾಮಾಜಿಕ ಹಾಗೂ ರಾಜಕೀಯ ಹಿನ್ನೆಲೆಯ ಇಬ್ಬರು ಮಹಿಳೆಯರ ನಡುವಿನ ಸಂಬಂಧದ ಮೂಲಕ ಅಧಿಕಾರ, ವರ್ಗಭೇದ ಮತ್ತು ವಸಾಹತುಶಾಹಿಯ ಪರಿಣಾಮಗಳನ್ನು ಕಾದಂಬರಿ ಚಿತ್ರಿಸುತ್ತದೆ.

ಮಂಗಳವಾರ ಲಂಡನ್‌ನ ಟೇಟ್ ಮಾಡರ್ನ್‌ನಲ್ಲಿ ನಡೆದ ಸಮಾರಂಭದಲ್ಲಿ 2026ರ ಅಂತರರಾಷ್ಟ್ರೀಯ ಬೂಕ‌ರ್ ಪ್ರಶಸ್ತಿಯನ್ನು ತೀರ್ಪುಗಾರರ ಮಂಡಳಿಯ ಮುಖ್ಯಸ್ಥೆ ನತಾಶಾ ಬ್ರೌನ್ ಘೋಷಿಸಿದರು. ಈ ವೇಳೆ, “ಈ ಕಾದಂಬರಿ ಪ್ರೇಮಕಥೆಯ ಜೊತೆಗೆ ವಸಾಹತುಶಾಹಿಯ ಪರಿಣಾಮಗಳನ್ನೂ ಪರಿಣಾಮಕಾರಿಯಾಗಿ ಚಿತ್ರಿಸಿದೆ. ಹಲವು ಅಂಶಗಳನ್ನು ಒಳಗೊಂಡಿರುವ ಈ ಕೃತಿ ಓದುಗರನ್ನು ಆಕರ್ಷಿಸುತ್ತದೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
‘Taiwan Travelogue’ ಯಾಂಗ್ ಶುವಾಂಗ್-ಝಿ ಅವರ ಇಂಗ್ಲಿಷ್‌ಗೆ ಅನುವಾದಗೊಂಡ ಮೊದಲ ಕೃತಿಯಾಗಿದೆ. ಮ್ಯಾಂಡರಿನ್ ಚೈನೀಸ್ ಭಾಷೆಯಿಂದ ಅನುವಾದವಾಗಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಮೊದಲ ಕೃತಿಯೂ ಇದಾಗಿದೆ. ಕಳೆದ ವರ್ಷ ‘ಹಾರ್ಟ್ ಲ್ಯಾಂಪ್ ಕೃತಿಯ ಬಳಿಕ, ‘ಆಂಡ್ ಅದರ್ ಸ್ಟೋರೀಸ್’ ಪ್ರಕಟಿಸಿದ ಮತ್ತೊಂದು ಕೃತಿಗೆ ಈ ಪ್ರಶಸ್ತಿ ದೊರೆತಿರುವುದು ಸತತ ಎರಡನೇ ವರ್ಷವಾಗಿದೆ.
ಇಂಗ್ಲಿಷ್‌ಗೆ ಅನುವಾದಿಸಲಾದ ಅತ್ಯುತ್ತಮ ಕಾದಂಬರಿಗೆ ನೀಡಲಾಗುವ 50,000 ಪೌಂಡ್ಸ್ ಮೊತ್ತದ ಬಹುಮಾನವನ್ನು ಲೇಖಕ ಯಾಂಗ್ ಶುವಾಂಗ್-ಝಿ ಮತ್ತು ಅನುವಾದಕಿ ಲಿನ್ ಕಿಂಗ್ ಸಮಾನವಾಗಿ ಹಂಚಿಕೊಳ್ಳಲಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *