ಗಂಗಾವತಿ: ಸಾಲದ ಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹ*ತ್ಯೆ!

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತರನ್ನು ಪ್ರಶಾಂತ್ ನಗರದ ನಿವಾಸಿಗಳಾದ 54 ವರ್ಷದ ಪ್ರಕಾಶ್ ರಾಯ್ಕರ್, ಅವರ ಪತ್ನಿ 46 ವರ್ಷದ ಪ್ರಭಾ ರಾಯ್ಕರ್ ಹಾಗೂ ಅವರ 21 ವರ್ಷದ ಪುತ್ರ ಶಶಾಂಕ್ ರಾಯ್ಕರ್ ಎಂದು ಗುರುತಿಸಲಾಗಿದೆ. ಪ್ರಶಾಂತ್ ನಗರದಲ್ಲಿರುವ ತಮ್ಮ ಸ್ವಗೃಹದಲ್ಲೇ ಮೂವರೂ ಒಟ್ಟಿಗೆ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ.
ಮೃತ ಪ್ರಕಾಶ್ ರಾಯ್ಕರ್ ಅವರು ಗಂಗಾವತಿಯಲ್ಲಿ ಜುವೆಲ್ಲರಿ ಅಂಗಡಿಯನ್ನು ನಡೆಸುತ್ತಿದ್ದರು. ಕಳೆದ ಕೆಲವು ಸಮಯದಿಂದ ಅವರ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು ಎನ್ನಲಾಗಿದೆ. ದಿನೇ ದಿನೇ ಹೆಚ್ಚುತ್ತಿದ್ದ ಸಾಲದ ಹೊರೆ ಮತ್ತು ಅದರಿಂದ ಉಂಟಾದ ಮಾನಸಿಕ ಒತ್ತಡವೇ ಈ ಘೋರ ದುರಂತಕ್ಕೆ ಮುಖ್ಯ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಗಂಗಾವತಿ ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದ್ದು, ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಸಿಕ್ಕಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.