ರಾಜಸ್ಥಾನದಲ್ಲಿ ರೈಲ್ವೆ ಹಳಿಯ ಮೇಲೆ ಸ್ಫೋಟ: ಎರಡು ಕಾಂಕ್ರೀಟ್ ಪಿಲ್ಲರ್‌ಗಳು ಧ್ವಂಸ

ಜೈಪುರ: ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ(India Pakistan International Border) ಸಮೀಪವಿರುವ ರಾಜಸ್ಥಾನದ ಶ್ರೀ ಗಂಗಾನಗರ(Rajasthan’s Sri Ganganagar) ಜಿಲ್ಲೆಯಲ್ಲಿ ರೈಲ್ವೆ ಹಳಿಯ(Railway Track) ಮೇಲೆ ಭಾರಿ ಸ್ಫೋಟ ಸಂಭವಿಸಿದೆ. ಘಟನೆಯ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಅನೂಪ್‌ಗಢ್ ಮತ್ತು ಸೂರತ್‌ಗಢ್ ನಡುವಿನ ರೈಲು ಸಂಚಾರವನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ.
ಅನೂಪ್‌ಗಢ್-ಸೂರತ್‌ಗಢ್ ರೈಲು ಮಾರ್ಗದ ’50 ಜಿಬಿ’ ಪಾಯಿಂಟ್ ಬಳಿ ಈ ಸ್ಫೋಟ ಸಂಭವಿಸಿದೆ. ಇದರ ಪರಿಣಾಮವಾಗಿ ಹಳಿಗೆ ಆಧಾರವಾಗಿದ್ದ ಎರಡು ಕಾಂಕ್ರೀಟ್ ಪಿಲ್ಲರ್‌ಗಳು ಹಾಗೂ ಹಲವು ರೈಲ್ವೆ ಸ್ಲೀಪರ್‌ಗಳು (ಕಾಂಕ್ರೀಟ್ ದಿಮ್ಮಿಗಳು) ಜಖಂಗೊಂಡಿವೆ.
ರಾತ್ರಿ ಸುಮಾರು 9 ಗಂಟೆಗೆ ಅನೂಪ್‌ಗಢ್‌ನಿಂದ ಸೂರತ್‌ಗಢ್‌ಗೆ ತೆರಳುತ್ತಿದ್ದ ರೈಲೊಂದು ಈ ಮಾರ್ಗವನ್ನು ದಾಟಿದ ಕೇವಲ 45 ನಿಮಿಷಗಳ ನಂತರ ಈ ಸ್ಫೋಟ ಸಂಭವಿಸಿದೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ಅದೃಷ್ಟವಶಾತ್ ತಪ್ಪಿದಂತಾಗಿದೆ.ಸ್ಫೋಟದ ತೀವ್ರತೆ ಹೆಚ್ಚಾಗಿದ್ದು, ಬರೋಬ್ಬರಿ 200 ಮೀಟರ್ ದೂರದವರೆಗೂ ಸದ್ದು ಕೇಳಿಬಂದಿದೆ. ಅಲ್ಲದೆ, ಹಳಿಯ ಕೆಳಭಾಗದಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಭಯೋತ್ಪಾದನಾ ನಿಗ್ರಹ ದಳ (ATS), ಅಪರಾಧ ತನಿಖಾ ಇಲಾಖೆ (CID), ಶ್ವಾನದಳ, ರೈಲ್ವೆ ಅಧಿಕಾರಿಗಳು ಹಾಗೂ ವಿವಿಧ ಭದ್ರತಾ ಸಂಸ್ಥೆಗಳ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿವೆ.
ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದು, ಸುತ್ತಮುತ್ತಲ ಪ್ರದೇಶವನ್ನು ಸುತ್ತುವರಿದು ತನಿಖೆ ಆರಂಭಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅನೂಪ್‌ಗಢ್ ಮತ್ತು ಸೂರತ್‌ಗಢ್ ನಡುವಿನ ರೈಲು ಸಂಚಾರವನ್ನು ಬೆಳಿಗ್ಗೆ 9 ಗಂಟೆಯವರೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.