ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ ದಿಲೀಪ್ ಗಾವಿತ್, ಮುರಳಿ ಶ್ರೀಶಂಕರ್‌ಗೆ ಬೆಳ್ಳಿ ಪದಕ!

ಗ್ಲಾಸ್ಕೊ: ಕಾಮನ್ವೆಲ್ತ್ ಗೇಮ್ಸ್ 2026ರಲ್ಲಿ ಬುಧವಾರ ಭಾರತಕ್ಕೆ ಮತ್ತೊಂದು ಯಶಸ್ವಿ ದಿನವಾಗಿ ಪರಿಣಮಿಸಿದ್ದು, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ದಿಲೀಪ್ ಮಹಾದು ಗಾವಿತ್ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಮೊಹಮ್ಮದ್ ಬಾಸಿಲ್ ಮೊರ್ಸಿಂಗನಕತ್ ಬೆಳ್ಳಿ ಗೆದ್ದರು. ಲಾಂಗ್ ಜಂಪ್ ಪಟು ಮುರಳಿ ಶ್ರೀಶಂಕರ್ ಸತತ ಎರಡನೇ ಬಾರಿಗೆ ಬೆಳ್ಳಿ ಪದಕ ಗೆದ್ದಿದ್ದು, 6 ಬಾಕ್ಸರ್‌ಗಳು ಸೆಮಿಫೈನಲ್ ಪ್ರವೇಶಿಸುವ ಮೂಲಕ ಬಾಕ್ಸಿಂಗ್‌ನಲ್ಲಿ ಮತ್ತಷ್ಟು ಪದಕಗಳನ್ನು ಖಚಿತಪಡಿಸಿದ್ದಾರೆ.

ಮೇಲ್ಬಾಗದ ಅಂಗವಿಕಲತೆ ಹೊಂದಿರುವ ಕ್ರೀಡಾಪಟುಗಳಿಗಾಗಿ ನಡೆದ ಪುರುಷರ 100 ಮೀಟರ್ ಟಿ47 ವಿಭಾಗದ ಸ್ಪರ್ಧೆಯಲ್ಲಿ ಭಾರತದ ಅಥೀಟ್‌ಗಳು ಮೊದಲ ಹಾಗೂ ಎರಡನೇ ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
ದಿಲೀಪ್ ಮಹಾದು ಗಾವಿತ್ 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ಕಾಮನ್ವೆಲ್ತ್ ಗೇಮ್ಸ್ ದಾಖಲೆಯನ್ನು ಮುರಿಯುವುದರ ಜೊತೆಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಮೊಹಮ್ಮದ್ ಬಾಸಿಲ್ ಮೊರ್ಸಿಂಗನಕತಿ 10.83 ಸೆಕೆಂಡುಗಳಲ್ಲಿ ಗುರಿ ತಲುಪಿ, ತಮ್ಮ ಈ ಋತುವಿನ ಅತ್ಯುತ್ತಮ ಸಾಧನೆಯೊಂದಿಗೆ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು.
ಈ ಗೆಲುವಿನೊಂದಿಗೆ ಗ್ಲಾಸ್ಕೊ ಗೇಮ್ಸ್‌ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಲಭಿಸಿದಂತಾಗಿದೆ. ಇದಕ್ಕೂ ಮೊದಲು, ಮಹಿಳೆಯರ 48 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಭಾರತದ ಚಿನ್ನದ ಬೇಟೆಯನ್ನು ಆರಂಭಿಸಿದ್ದರೆ, ನಂತರ ಶರ್ಮಿಳಾ ಧಂಕರ್ ಮಹಿಳೆಯರ ಎಫ್57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಮತ್ತೊಂದು ಚಿನ್ನದ ಪದಕ ತಂದುಕೊಟ್ಟಿದ್ದರು.
ಶ್ರೀಶಂಕರ್‌ಗೆ ಮತ್ತೊಂದು ಬೆಳ್ಳಿ ಪದಕ
ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ 8.09 ಮೀಟರ್ ಜಿಗಿತದೊಂದಿಗೆ ಬೆಳ್ಳಿ ಪದಕ ಗೆಲ್ಲುವ ಮೂಲಕ ಮುರಳಿ ಶ್ರೀಶಂಕರ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ತಮ್ಮ ಪ್ರಭಾವಶಾಲಿ ಪ್ರದರ್ಶನವನ್ನು ಮುಂದುವರಿಸಿದ್ದಾರೆ. 2022ರ ಗೇಮ್ಸ್‌ನಲ್ಲೂ ಎರಡನೇ ಸ್ಥಾನ ಗಳಿಸಿದ್ದ ಅವರು, ಈ ಸ್ಪರ್ಧೆಯಲ್ಲಿ ಸತತವಾಗಿ ಕಾಮನ್ವೆಲ್ತ್ ಗೇಮ್ಸ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅವರು ಆರಂಭದಲ್ಲಿ 8.03 ಮೀಟರ್ ಜಿಗಿಯುವ ಮೂಲಕ ಮೂರನೇ ಸ್ಥಾನದಲ್ಲಿದ್ದರು. ಜಮೈಕಾದ ತೇಜಯ್ ಗೇಲ್ ಮತ್ತು ಸ್ಕಾಟ್ನಾಂಡ್‌ನ ಸ್ಟೀಫನ್ ಮೆಕೆಂಜಿ 8.08 ಮೀಟರ್ ಜಿಗಿದು ಮೊದಲೆರಡು ಸ್ಥಾನದಲ್ಲಿದ್ದರು.
ಆದರೆ, ಶ್ರೀಶಂಕರ್ ಶೀಘ್ರದಲ್ಲಿಯೇ 8.09 ಮೀಟರ್ ಜಿಗಿತದೊಂದಿಗೆ ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿದರು. ಗೇಲ್ 8.15 ಮೀಟರ್ ಜಿಗಿಯುವ ಮೂಲಕ ಚಿನ್ನದ ಪದಕವನ್ನು ಗೆದ್ದರು. ಇದರೊಂದಿಗೆ ಶ್ರೀಶಂಕರ್ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಮೆಕೆಂಜಿ 8.08 ಮೀಟರ್ ಸಾಧನೆಯೊಂದಿಗೆ ಕಂಚು ಗೆದ್ದರು. ಭಾರತದ ಲೋಕೇಶ್ ಸತ್ಯನಾಥನ್ 7.97 ಮೀಟರ್ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದರು.
ಬಾಕ್ಸಿಂಗ್‌ನಲ್ಲಿ 10 ಪದಕಗಳು ಖಚಿತ
ಬುಧವಾರ ಭಾರತದ ಆರು ಬಾಕ್ಸರ್‌ಗಳು ಸೆಮಿಫೈನಲ್ ಪ್ರವೇಶಿಸುವ ಮೂಲಕ ಮತ್ತೊಂದು ಯಶಸ್ವಿ ದಿನವನ್ನಾಗಿ ಬದಲಾಯಿಸಿದರು. ಈ ಮೂಲಕ ಬಾಕ್ಸಿಂಗ್‌ನಲ್ಲಿ 10 ಪದಕಗಳು ಖಚಿತವಾಗಿದೆ.
ಇಂದು ಸಾಕ್ಷಿ ಚೌಧರಿ (51 ಕೆಜಿ), ಅರುಂಧತಿ ಚೌಧರಿ (70 ಕೆಜಿ), ಸಚಿನ್ ಸಿವಾಚ್ (60 ಕೆಜಿ), ಅಂಕುಶ್ ಪಂಗಾಲ್ (80 ಕೆಜಿ), ನರೇಂದರ್ ಬರ್ವಾಲ್ (+90 ಕೆಜಿ) ಮತ್ತು ವಿಶ್ವ ಚಾಂಪಿಯನ್ ಜೈಸ್ಟಿನ್ ಲಂಬೋರಿಯಾ (57 ಕೆಜಿ) ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.
ಇವರು ಈಗಾಗಲೇ ಸೆಮಿಫೈನಲ್ ತಲುಪಿದ್ದ ಲವಿನಾ ಬೊರ್ಗೊಹೈನ್ (75 ಕೆಜಿ), ಪ್ರಿಯಾ ಗಂಗಾಸ್ (60 ಕೆಜಿ), ಪ್ರೀತಿ ಪವಾರ್ (54 ಕೆಜಿ) ಮತ್ತು ಜಡುಮಣಿ ಸಿಂಗ್ (55 ಕೆಜಿ) ಅವರನ್ನು ಸೇರಿಕೊಂಡಿದ್ದು, ಈ ಮೂಲಕ ಪದಕಗಳನ್ನು ಖಚಿತಪಡಿಸಿದ್ದಾರೆ.