ಕುಕ್ಕೆ ಸುಬ್ರಹ್ಮಣ್ಯಕ್ಕೆ ಹರಿದುಬಂದ ಭಕ್ತಸಾಗರ: ಒಂದೇ ದಿನ 50,000ಕ್ಕೂ ಹೆಚ್ಚು ಭಕ್ತರಿಂದ ದರ್ಶನ!

ಕುಕ್ಕೆ ಸುಬ್ರಹ್ಮಣ್ಯ : ಸರಣಿ ರಜೆಗಳ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಅತ್ಯಂತ ಸುಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭಾನುವಾರ ದಾಖಲೆ ಪ್ರಮಾಣದಲ್ಲಿ ಭಕ್ತ ಸಾಗರ ಹರಿದುಬಂದಿದೆ. ಒಂದೇ ದಿನ ಬರೋಬ್ಬರಿ 50,000ಕ್ಕೂ ಹೆಚ್ಚು ಭಕ್ತಾದಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ. ಶುಕ್ರವಾರ ಮೊಹರಂ ಹಬ್ಬ, ಶನಿವಾರ ನಾಲ್ಕನೇ ಶನಿವಾರ ಹಾಗೂ ಭಾನುವಾರದ ವಾರಾಂತ್ಯದ ರಜೆ ಸೇರಿ ಸಾರ್ವಜನಿಕ ಹಾಗೂ ಖಾಸಗಿ ವಲಯದ ನೌಕರರಿಗೆ ಸರಣಿ ರಜೆಗಳು ಲಭ್ಯವಾಗಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಶುಕ್ರವಾರದಿಂದಲೇ ದೇವಸ್ಥಾನಕ್ಕೆ ಬರಲಾರಂಭಿಸಿದ್ದರು.

ಶುಕ್ರವಾರ ಮತ್ತು ಶನಿವಾರದಿಂದಲೇ ದೇವಸ್ಥಾನದ ಎಲ್ಲಾ ವಸತಿಗೃಹಗಳು ಹಾಗೂ ಸುಬ್ರಹ್ಮಣ್ಯದ ಬಹುತೇಕ ಎಲ್ಲಾ ಖಾಸಗಿ ಲಾಡ್ಜ್ಗಳು ಸಂಪೂರ್ಣ ಭರ್ತಿಯಾಗಿದ್ದವು. ಶನಿವಾರ ರಾತ್ರಿ ವಾಸ್ತವ್ಯಕ್ಕಾಗಿ ಕೊಠಡಿಗಳು ಸಿಗದೆ ನೂರಾರು ಭಕ್ತರು ಶ್ರೀ ದೇವಳದ ರಥಬೀದಿಯ ಸಭಾಂಗಣ ಹಾಗೂ ದೇವಸ್ಥಾನದ ಛತ್ರಗಳಲ್ಲಿ ಆಶ್ರಯ ಪಡೆದ ದೃಶ್ಯಗಳು ಕಂಡುಬಂದವು. ಇನ್ನು ದೇವಸ್ಥಾನದ ಸುತ್ತಮುತ್ತಲಿನ ಪಾರ್ಕಿಂಗ್ ಪ್ರದೇಶಗಳು ಸಂಪೂರ್ಣ ಭರ್ತಿಯಾಗಿದ್ದರಿಂದ ಹೆದ್ದಾರಿಯ ಇಕ್ಕೆಲಗಳಲ್ಲೇ ವಾಹನಗಳನ್ನು ಸಾಲುಗಟ್ಟಿ ನಿಲ್ಲಿಸಲಾಗಿತ್ತು.
ಶನಿವಾರ ಮತ್ತು ಭಾನುವಾರ ಮುಂಜಾನೆಯಿಂದಲೇ ಕುಮಾರಧಾರೆ ಸ್ನಾನಗಟ್ಟದಲ್ಲಿ ಸಹಸ್ರಾರು ಭಕ್ತರು ತೀರ್ಥಸ್ನಾನ ನೆರವೇರಿಸಿ, ದೇವಳದ ಹೊರಾಂಗಣದವರೆಗೆ ವ್ಯಾಪಿಸಿದ್ದ ಸುದೀರ್ಘ ಸರತಿ ಸಾಲಿನಲ್ಲಿ ನಿಂತು ಶ್ರೀ ದೇವರ ದರ್ಶನ ಪಡೆದರು. ಭಕ್ತರ ಅನುಕೂಲಕ್ಕಾಗಿ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ನಿರಂತರ ಉಪಹಾರ ವ್ಯವಸ್ಥೆ ಹಾಗೂ ಬೆಳಗ್ಗೆ 10:30 ರಿಂದ ಸಂಜೆ 4 ಗಂಟೆಯವರೆಗೆ ಸತತವಾಗಿ ಅನ್ನದಾನ ಸೇವೆ ಜರುಗಿತು. ಭೋಜನ ಪ್ರಸಾದದಲ್ಲಿ ಭಕ್ತರಿಗೆ ಸಾಂಬಾರ್, ಚಟ್ನಿ, ಪಲ್ಯ, ಮಜ್ಜಿಗೆ ಹಾಗೂ ವಿಶೇಷವಾಗಿ ಪಾಯಸದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ಸುಗಮ ದರ್ಶನ, ಪಾರ್ಕಿಂಗ್ ನಿಯಂತ್ರಣ ಮತ್ತು ಸುರಕ್ಷತೆಗಾಗಿ ದೇವಳದ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ಸುಬ್ರಹ್ಮಣ್ಯ ಪೊಲೀಸ್ ಸಿಬ್ಬಂದಿ ಹಗಲಿರುಳು ಶ್ರಮಿಸಿದರು.