ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ ಅಂತ್ಯ: ‘ಮಾತುಕತೆ ವ್ಯರ್ಥ’ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

ಅಂಕಾರಾ/ವಾಷಿಂಗ್ಟನ್: “ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದವು ಈಗ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಉಭಯ ದೇಶಗಳ ನಡುವೆ ಮತ್ತೆ ಬಿಕ್ಕಟ್ಟು ತಾರಕಕ್ಕೇರಿರುವುದರಿಂದ ಇರಾನ್ ಜೊತೆ ಇನ್ನು ಮುಂದೆ ಯಾವುದೇ ಮಾತುಕತೆ ನಡೆಸುವುದು ಅರ್ಥಹೀನ ಮತ್ತು ಸಮಯ ವ್ಯರ್ಥ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಂತ ಕಠಿಣ ಪದಗಳಲ್ಲಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ಇರಾನ್ ನಾಯಕರನ್ನು ‘ವಿಕೃತ ಮನಸ್ಥಿತಿಯ ನೀಚರು’ ಎಂದು ಕರೆದಿರುವ ಅವರು, ಇರಾನ್ ಜಗತ್ತಿನ ಪ್ರಮುಖ ಭಯೋತ್ಪಾದನಾ ಪ್ರಾಯೋಜಿತ ರಾಷ್ಟ್ರ ಎಂದು ಜರೆದಿದ್ದಾರೆ.

ಟರ್ಕಿಯ ಅಂಕಾರಾದಲ್ಲಿ ನಡೆದ ನ್ಯಾಟೋ (NATO) ಶೃಂಗಸಭೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ವಿರುದ್ಧ ಅಮೆರಿಕ ಈಗಾಗಲೇ ಅತ್ಯಂತ ಪ್ರಬಲವಾದ ದಾಳಿಗಳನ್ನು ನಡೆಸಿದೆ ಎಂದು ಸ್ಪಷ್ಟಪಡಿಸಿದರು. “ಒಂದು ವೇಳೆ ಇರಾನ್ ಮತ್ತಷ್ಟು ದಾಳಿಗಳಿಗೆ ಮುಂದಾದರೆ, ಅಮೆರಿಕವು ಅದಕ್ಕೆ ’20 ಪಟ್ಟು ಹೆಚ್ಚು ಬಲಿಷ್ಠ’ವಾಗಿ ಪ್ರತಿಕ್ರಿಯಿಸಲಿದೆ” ಎಂದು ತೀವ್ರ ಎಚ್ಚರಿಕೆ ನೀಡಿದ್ದಾರೆ. ಇರಾನ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಅವರು ಕ್ರೂರಿಗಳು ಮತ್ತು ಹಿಂಸಾತ್ಮಕ ಸ್ವಭಾವದವರು. ಅವರ ಬಳಿ ಪರಮಾಣು ಅಸ್ತ್ರವಿದ್ದಿದ್ದರೆ, ಅವರು ಅದನ್ನು ಎಂದೋ ಬಳಸಿಬಿಡುತ್ತಿದ್ದರು. ಆದರೆ ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರ ಹೊಂದುವುದಕ್ಕೆ ಅಮೆರಿಕ ಬಿಡುವುದಿಲ್ಲ. ಅದನ್ನು ನಾವು ನಾಶಪಡಿಸಲಿದ್ದೇವೆ” ಎಂದು ಪುನರುಚ್ಚರಿಸಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಇತ್ತೀಚೆಗೆ ಮೂರು ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಗಳಿಗೆ ಇರಾನ್ ಪ್ರಮುಖ ಕಾರಣ ಎಂದು ಅಮೆರಿಕ ಅಧ್ಯಕ್ಷರು ದೂಷಿಸಿದ್ದಾರೆ. “ಇರಾನ್ ತನ್ನ ಮೃತ ನಾಯಕನ ಅಂತ್ಯಕ್ರಿಯೆಯ ಮೇಲೆ ಗಮನ ಕೇಂದ್ರೀಕರಿಸುವ ಬದಲು ಜಾಗತಿಕ ಹಡಗುಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ” ಎಂದು ಟ್ರಂಪ್ ಕಟುವಾಗಿ ಟೀಕಿಸಿದರು. ಇದೇ ವೇಳೆ ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ನ್ಯಾಟೋ ಮೈತ್ರಿಕೂಟದ ನಿಲುವಿಗೆ ತಮ್ಮ ತೀವ್ರ ಅತೃಪ್ತಿಯನ್ನು ವ್ಯಕ್ತಪಡಿಸಿದರು.