ಪರೀಕ್ಷೆಗೆ ರೈಲು ಸಿಗದೆ ಹಳಿಗಳ ಮೇಲೆ ಕುಳಿತ ಅಭ್ಯರ್ಥಿಗಳು; ನಿಯಂತ್ರಣಕ್ಕೆ ಪೊಲೀಸರ ಹರಸಾಹಸ!

ಪಟ್ನಾ: ಬಿಹಾರ ಪೊಲೀಸ್ ಪ್ರೊಹಿಬಿಷನ್ ಕಾನ್ಸ್ಟೇಬಲ್ (Bihar Police Prohibition Constable) ನೇಮಕಾತಿ ಪರೀಕ್ಷೆಗೆ ಹಾಜರಾಗಬೇಕಿದ್ದ ಸಾವಿರಾರು ಅಭ್ಯರ್ಥಿಗಳು, ರೈಲುಗಳ ಕೊರತೆಯನ್ನು ವಿರೋಧಿಸಿ ಶನಿವಾರ ಪಟ್ಲಿಪುತ್ರ ರೈಲು ನಿಲ್ದಾಣದಲ್ಲಿ ನಡೆಸಿದ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ.
ಟ್ರ್ಯಾಕ್ ಮೇಲೆ ಅಭ್ಯರ್ಥಿಗಳ ಧರಣಿ
ಭಾನುವಾರ ನಡೆಯಬೇಕಿದ್ದ ಪರೀಕ್ಷೆಗಾಗಿ ಅಭ್ಯರ್ಥಿಗಳು ಶನಿವಾರ ರಾತ್ರಿಯೇ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ರೈಲುಗಳ ವ್ಯವಸ್ಥೆ ಇಲ್ಲದಿರುವುದಕ್ಕೆ ಆಕ್ರೋಶಗೊಂಡ ಅಭ್ಯರ್ಥಿಗಳು ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಪಟ್ಲಿಪುತ್ರ-ಕತಿಹಾರ್ ವಿಶೇಷ ರೈಲನ್ನು ಏರಲು ಮುಂದಾದಾಗ ಉಂಟಾದ ನೂಕುನುಗ್ಗಲು ಘರ್ಷಣೆಗೆ ದಾರಿ ಮಾಡಿಕೊಟ್ಟಿತು.
ಭುಗಿಲೆದ್ದ ಆಕ್ರೋಶ, ರೈಲು ಸಂಚಾರಕ್ಕೆ ಅಡ್ಡಿ
ಪ್ರತಿಭಟನೆಯ ಸಂದರ್ಭದಲ್ಲಿ ವಿಶೇಷ ರೈಲಿನೊಳಗೆ ವ್ಯಾಪಕ ಹಾನಿ ಉಂಟಾಗಿದೆ. ಗಂಟೆಗಟ್ಟಲೆ ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ರೈಲ್ವೆ ಕಾರ್ಯಾಚರಣೆಗೆ ತೀವ್ರ ಅಡ್ಡಿಯುಂಟಾಯಿತು. ಈ ವೇಳೆ ದನಪುರ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಅಭ್ಯರ್ಥಿಗಳನ್ನು ಸಮಾಧಾನಪಡಿಸಲು ಯತ್ನಿಸಿದರು.
ನಿಯಂತ್ರಣಕ್ಕೆ ಪೊಲೀಸರ ಹರಸಾಹಸ
ಪರಿಸ್ಥಿತಿ ಕೈಮೀರುತ್ತಿದ್ದಂತೆ, ಜನಸಮೂಹವನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದಾಗ, ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಘರ್ಷಣೆಯಲ್ಲಿ ಐಜಿ ಜಿತೇಂದ್ರ ರಾಣಾ ಮತ್ತು ರೂಪಸ್ಪುರ ಪೊಲೀಸ್ ಠಾಣೆಯ ಇನ್ಚಾರ್ಜ್ ಅಧಿಕಾರಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಬಿಗಿ ಭದ್ರತೆ, ವಿಶೇಷ ರೈಲುಗಳ ವ್ಯವಸ್ಥೆ
ಪ್ರತಿಭಟನೆಯ ನಂತರ ನಿಲ್ದಾಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಇಲಾಖೆಯು ಹೆಚ್ಚುವರಿ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿದೆ. ಅಧಿಕಾರಿಗಳು ರೈಲು ಸಂಚಾರವನ್ನು ಸಹಜ ಸ್ಥಿತಿಗೆ ತರಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
