Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕ್ರಿಕೆಟಿಗ ಅಭಿಷೇಕ್ ಪೊರೆಲ್ ಬಂಧನಕ್ಕೆ ಹೈಕೋರ್ಟ್ ಆದೇಶ!

Spread the love

ಕೋಲ್ಕತ್ತಾ: ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ದಾಖಲಿಸಿರುವ ಅತ್ಯಾಚಾರ, ಬ್ಲಾಕ್‌ಮೇಲ್, ಹಲ್ಲೆ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತ ಹಾಗೂ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಅಭಿಷೇಕ್ ಪೊರೆಲ್ ಮತ್ತು ಮತ್ತೊಬ್ಬ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಕಲ್ಕತ್ತಾ ಹೈಕೋರ್ಟ್‌ ಆದೇಶಿಸಿದೆ.
ಆರೋಪಿಗಳ ಬಳಿಯಿರುವ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ತಕ್ಷಣ ವಶಪಡಿಸಿಕೊಳ್ಳುವಂತೆಯೂ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರು, ಸಂತ್ರಸ್ತೆಯ ಖಾಸಗಿ ಫೊಟೋಗಳು ಮತ್ತಷ್ಟು ಪ್ರಸಾರವಾಗುವುದನ್ನು ತಡೆಯುವ ಉದ್ದೇಶದಿಂದ ಅಭಿಷೇಕ್ ಪೊರೆಲ್ ಅವರನ್ನು ತಕ್ಷಣ ಬಂಧಿಸಿ, ಅವರ ಬಳಿಯಿರುವ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳುವಂತೆ ಮೊಗ್ರಾ ಪೊಲೀಸರಿಗೆ ನಿರ್ದೇಶನ ನೀಡಿದರು.ಅಭಿಷೇಕ್ ಪೊರೆಲ್ ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ಪರವಾಗಿ ಯಾವುದೇ ವಕೀಲರು ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ.
ದೂರುದಾರರ ಪರ ವಕೀಲರಾದ ರಾಂದೇವ್ ಸೇನ್‌ ಗುಪ್ತಾ ಮತ್ತು ಆಕಾಶ್ ಗಂಗೋಪಾಧ್ಯಾಯ ಅವರು, ಆರೋಪಿಗಳ ಎಲೆಕ್ಟ್ರಾನಿಕ್ ಸಾಧನಗಳನ್ನು ತಕ್ಷಣ ವಶಪಡಿಸಿಕೊಳ್ಳದಿದ್ದರೆ ಸಂತ್ರಸ್ತೆಯ ಖಾಸಗಿ ಫೊಟೋಗಳು ಮತ್ತಷ್ಟು ಪ್ರಸಾರವಾಗುವ ಗಂಭೀರ ಅಪಾಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ಪೊರೆಲ್ ಇದೇ ರೀತಿಯಲ್ಲಿ ಹಲವಾರು ಯುವತಿಯರೊಂದಿಗೆ ಪ್ರಣಯ ಸಂಬಂಧ ಬೆಳೆಸಿ, ಅವರ ಖಾಸಗಿ ಫೊಟೋಗಳನ್ನು ಪಡೆದು ಬಳಿಕ ಬ್ಲಾಕ್‌ಮೇಲ್ ಮಾಡಿರುವ ಆರೋಪಗಳೂ ಇವೆ ಎಂದು ವಾದಿಸಿದರು.

ಪ್ರಕರಣಕ್ಕೆ ಸಂಬಂಧಿಸಿದ ಪ್ರಾಥಮಿಕ ಪುರಾವೆಗಳನ್ನು ದೂರುದಾರರ ಪರ ನ್ಯಾಯಾಲಯದ ಮುಂದೆ ಮಂಡಿಸಲಾಯಿತು. ನ್ಯಾಯಾಲಯದ ಆದೇಶದ ಅನುಷ್ಠಾನಕ್ಕಾಗಿ ಕೈಗೊಂಡಿರುವ ಎಲ್ಲ ಕ್ರಮಗಳ ಕುರಿತು ವಿವರವಾದ ವರದಿಯನ್ನು ಆಗಸ್ಟ್ 11ರೊಳಗೆ ಸಲ್ಲಿಸುವಂತೆ ತನಿಖಾ ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ.
ಮೊಗ್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 346/2026ರಡಿ ದಾಖಲಾದ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಅಡಿಯಲ್ಲಿ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳನ್ನು ಅಭಿಷೇಕ್ ಪೊರೆಲ್ ವಿರುದ್ಧ ದಾಖಲಿಸಲಾಗಿದೆ.

23 ವರ್ಷದ ಮಹಿಳೆ ಹಾಗೂ ಆಕೆಯ ತಾಯಿ ಮೊಗ್ರಾ ಪೊಲೀಸ್ ಠಾಣೆಯಲ್ಲಿ ಜಂಟಿಯಾಗಿ ದೂರು ದಾಖಲಿಸಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿ ತನ್ನೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದು, ಬಳಿಕ ಆ ಭರವಸೆಯಿಂದ ಹಿಂದೆ ಸರಿದಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ, ತನ್ನ ಮೇಲೆ ಹಲ್ಲೆ ನಡೆಸಿ ಕ್ರಿಮಿನಲ್ ಬೆದರಿಕೆ ಹಾಕಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರುದಾರೆಯ ಪ್ರಕಾರ, ತಾನು ಮತ್ತು ಅಭಿಷೇಕ್ ಪೊರೆಲ್ ಕಳೆದ ಮೂರು ವರ್ಷಗಳಿಂದ ಪ್ರಣಯ ಸಂಬಂಧದಲ್ಲಿದ್ದರು. ಕಳೆದ ವರ್ಷದಿಂದ ಪೊರೆಲ್ ತನ್ನಿಂದ ದೂರವಾಗಲು ಆರಂಭಿಸಿದ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಪ್ರಕರಣದ ಕುರಿತು ಈ ಹಿಂದೆ ಪ್ರತಿಕ್ರಿಯಿಸಿದ್ದ ಅಭಿಷೇಕ್ ಪೊರೆಲ್, “ನಾನು ಈಗ ಚೆನ್ನಾಗಿ ಆಡುತ್ತಿದ್ದೇನೆ. ಆದ್ದರಿಂದ ನನ್ನ ಬಗ್ಗೆ ವಿವಿಧ ರೀತಿಯ ವಿಷಯಗಳು ಹೊರಬರುತ್ತಿವೆ. ಪೊಲೀಸರ ತನಿಖೆ ಪೂರ್ಣಗೊಂಡ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ. ಈವರೆಗೆ ನಾನು ಪೊಲೀಸರೊಂದಿಗೆ ಮಾತನಾಡಿಲ್ಲ” ಎಂದು ಹೇಳಿದ್ದರು.
ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 11ರಂದು ನಡೆಯಲಿದೆ.


Spread the love
Share:

administrator

Leave a Reply

Your email address will not be published. Required fields are marked *