ಮೀನುಗಾರಿಕಾ ಬೋಟ್‌ನ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ದುರಂತ: ಮೂವರು ಮೀನುಗಾರರು ಬಲಿ!

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಮೀನುಗಾರಿಕಾ ಬೋಟ್‌ನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ವಿಷಕಾರಿ ವಾಸನೆ ಉಸಿರುಗಟ್ಟಿ ಮೂವರು ಮೀನುಗಾರರು ದಾರುಣವಾಗಿ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಅಸ್ವಸ್ಥಗೊಂಡಿರುವ ಭೀಕರ ದುರಂತ ಮಂಗಳವಾರ ಸಂಭವಿಸಿದೆ. ಮೃತ ಮೀನುಗಾರರನ್ನು ನೌಶಾದ್ (48), ಅಮೀನ್ (40) ಹಾಗೂ ಅಮನ್ (26) ಎಂದು ಗುರುತಿಸಲಾಗಿದೆ.ಗೋಕರ್ಣದ ತದಡಿ ಬಂದರಿನಲ್ಲಿ ಲಂಗರು ಹಾಕಿದ್ದ ‘ಕುಚೈಮಾ’ ಎಂಬ ಮೀನುಗಾರಿಕಾ ಬೋಟ್‌ನಲ್ಲಿ ಈ ದುರಂತ ಸಂಭವಿಸಿದೆ. ಬೋಟ್‌ನಲ್ಲಿದ್ದ ಮೀನುಗಾರರು ಸಮುದ್ರದಿಂದ ‘ಚಮನ್’ ತಳಿಯ ಮೀನುಗಳನ್ನು ಹಿಡಿದು ಬಂದರಿಗೆ ಮರಳಿದ್ದರು. ಬಂದರಿಗೆ ತಲುಪಿದ ಬಳಿಕ ಬೋಟ್‌ನಲ್ಲಿದ್ದ ಮೀನು ಸಂಗ್ರಹಣಾ ಟ್ಯಾಂಕ್‌ನಿಂದ (Storage Tank) ಮೀನುಗಳನ್ನು ಖಾಲಿ ಮಾಡಲಾಗಿತ್ತು. ಬಳಿಕ ಮೀನುಗಾರರು ಖಾಲಿಯಾದ ಟ್ಯಾಂಕ್‌ಗೆ ಇಳಿದು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಟ್ಯಾಂಕ್‌ನಲ್ಲಿದ್ದ ಮೀನಿನ ಕೊಳೆತ ಅಥವಾ ವಿಷಕಾರಿ ಅನಿಲದ (Poisonous Gas) ದುರ್ವಾಸನೆಯಿಂದಾಗಿ ಒಳಗಿದ್ದ ಮೀನುಗಾರರು ತೀವ್ರ ಉಸಿರುಗಟ್ಟಿ ಸ್ಥಳದಲ್ಲೇ ಅಸಹಾಯಕರಾಗಿ ಮೃತಪಟ್ಟಿದ್ದಾರೆ.

ವಿಷಕಾರಿ ಅನಿಲದ ಆಘಾತದಿಂದ ಒಟ್ಟು ಐವರು ಮೀನುಗಾರರು ಟ್ಯಾಂಕ್ ಒಳಗೆ ಸಿಲುಕಿಕೊಂಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸಹ-ಮೀನುಗಾರರು ಇಬ್ಬರನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟವರ ಪೈಕಿ ಅಬ್ದುಲ್ ಯಾಕುಬ್ ದಾಡಿಯಾ (60) ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಅವರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೋಟ್‌ನ ಭದ್ರತಾ ಕ್ರಮಗಳು ಹಾಗೂ ಅನಿಲ ಸೋರಿಕೆಯ ಕಾರಣಗಳ ಕುರಿತು ಪೊಲೀಸರು ಸುದೀರ್ಘ ತನಿಖೆ ಕೈಗೊಂಡಿದ್ದಾರೆ.