ಹೆಲ್ತ್ ಇನ್ಶೂರೆನ್ಸ್ ನವೀಕರಣದ ಹೆಸರಲ್ಲಿ ವಂಚನೆ: ಮಂಗಳೂರಿನ ಮಹಿಳೆಗೆ ₹2.68 ಲಕ್ಷ ಪಂಗನಾಮ!

ಮಂಗಳೂರು: ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ನವೀಕರಣ (Renewal) ಮಾಡುವ ನೆಪದಲ್ಲಿ ಆನ್ಲೈನ್ ಲಿಂಕ್ ಕಳುಹಿಸಿ ಹಾಗೂ ಒಟಿಪಿ (OTP) ಪಡೆದುಕೊಂಡು 42 ವರ್ಷದ ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್ನಿಂದ ಬರೋಬ್ಬರಿ ₹2.68 ಲಕ್ಷಕ್ಕೂ ಅಧಿಕ ಹಣವನ್ನು ಎಗರಿಸಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವಂಚನೆಗೊಳಗಾದ 42 ವರ್ಷದ ಮಹಿಳೆ ನೀಡಿದ ದೂರಿನನ್ವಯ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಸೈಬರ್ ಅಪರಾಧ ಪ್ರಕರಣ ದಾಖಲಾಗಿದೆ.ದೂರುದಾರರಿಗೆ ಅಕ್ಟೋಬರ್ 16, 2026ರಂದು ‘8976114711’ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ ಅಪರಿಚಿತ ಸೈಬರ್ ಚೋರನೊಬ್ಬ, “ನಿಮ್ಮ ‘ICICI Lombard Health Insurance’ ನವೀಕರಣದ ಅವಧಿ ಮುಕ್ತಾಯಗೊಳ್ಳಲಿದ್ದು, ತಕ್ಷಣವೇ ಪ್ರೀಮಿಯಂ ಹಣ ಪಾವತಿಸಬೇಕು” ಎಂದು ನಂಬಿಸಿದ್ದಾನೆ. ಬಾಧಿತ ಮಹಿಳೆ ಪ್ರತಿವರ್ಷ ತಮ್ಮ ಕ್ರೆಡಿಟ್ ಕಾರ್ಡ್ ಮೂಲಕವೇ ಆನ್ಲೈನ್ನಲ್ಲಿ ಪ್ರೀಮಿಯಂ ಕಟ್ಟುತ್ತಿದ್ದ ಕಾರಣ, ಅಪರಿಚಿತನ ಮಾತನ್ನು ನಿಜವೆಂದು ನಂಬಿದ್ದಾರೆ. ಬಳಿಕ ವಂಚಕನು ವಾಟ್ಸ್ಆ್ಯಪ್ (WhatsApp) ಮೂಲಕ ಪ್ರೀಮಿಯಂ ಪಾವತಿಸಲು ನಕಲಿ ಲಿಂಕ್ ರವಾನಿಸಿದ್ದಾನೆ. ಆ ಲಿಂಕ್ ಕ್ಲಿಕ್ ಮಾಡಿದ ಮಹಿಳೆ ಅಕ್ಟೋಬರ್ 23ರಂದು ಎರಡು ಕಂತುಗಳಲ್ಲಿ ಒಟ್ಟು ₹27,764 ಹಣವನ್ನು ಪಾವತಿಸಿದ್ದಾರೆ.
ಇದಾದ ಬಳಿಕ ಅಕ್ಟೋಬರ್ 24ರಂದು ಮತ್ತೆ ಅದೇ ಸಂಖ್ಯೆಯಿಂದ ಕರೆ ಮಾಡಿದ ಆರೋಪಿ, “ಇನ್ಶೂರೆನ್ಸ್ ವೆರಿಫಿಕೇಶನ್ಗಾಗಿ ನಿಮ್ಮ ಮೊಬೈಲ್ಗೆ ಒಟಿಪಿ ಕಳುಹಿಸಲಾಗಿದೆ, ಅದನ್ನು ತಿಳಿಸಿ” ಎಂದು ಕೇಳಿದ್ದಾನೆ. ಆತನ ಕುತಂತ್ರ ತಿಳಿಯದೆ ಮಹಿಳೆ ತಮ್ಮ ಮೊಬೈಲ್ಗೆ ಬಂದ ಒಟಿಪಿಯನ್ನು ಹಂಚಿಕೊಂಡಿದ್ದಾರೆ. ಒಟಿಪಿ ಸಿಗುತ್ತಿದ್ದಂತೆಯೇ ಆರೋಪಿಗಳು ಮಹಿಳೆಯ HSBC ಬ್ಯಾಂಕ್ನ ಕ್ರೆಡಿಟ್ ಕಾರ್ಡ್ನಿಂದ ಅಕ್ಟೋಬರ್ 23ರಿಂದ ಅಕ್ಟೋಬರ್ 25ರ ನಡುವಿನ ಅವಧಿಯಲ್ಲಿ ಹಂತ ಹಂತವಾಗಿ ಬರೋಬ್ಬರಿ ₹2,68,803 (ಎರಡು ಲಕ್ಷದ ಅರವತ್ತೆಂಟು ಸಾವಿರದ ಎಂಟು ನೂರ ಮೂರು ರೂಪಾಯಿ) ಹಣವನ್ನು ಅಕ್ರಮವಾಗಿ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ತಮ್ಮ ಕ್ರೆಡಿಟ್ ಕಾರ್ಡ್ನಿಂದ ಲಕ್ಷಾಂತರ ರೂಪಾಯಿ ಹಣ ಹೋದದ್ದು ಕಂಡು ಆಘಾತಕ್ಕೊಳಗಾದ ಮಹಿಳೆ, CEN ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act 2000) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS 2023) ಅಡಿಯಲ್ಲಿ ಸೈಬರ್ ವಂಚಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
