ಬೆಂಗಳೂರು: ಕೊನೆ ಕ್ಷಣದಲ್ಲಿ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿಕೆ – ಇಂದಿನಿಂದ ಎಂದಿನಂತೆ ಎಲ್ಲಾ ಬ್ಯಾಂಕ್‌ಗಳು ಓಪನ್!

ಸೆಪ್ಟೆಂಬರ್ 28ರಿಂದ 30ರವರೆಗೆ ನಡೆಯಬೇಕಿದ್ದ 3 ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ಬ್ಯಾಂಕ್ ಒಕ್ಕೂಟಗಳ ಒಕ್ಕೂಟ ಕೊನೆ ಕ್ಷಣದಲ್ಲಿ ಮುಂದೂಡಿದೆ. ಭಾನುವಾರ ತಡರಾತ್ರಿ ಭಾರತೀಯ ಬ್ಯಾಂಕುಗಳ ಸಂಘದ ಜೊತೆ ನಡೆದ ಸಭೆಯಲ್ಲಿ, ‘ಎಲ್ಲಾ ಶನಿವಾರ ರಜೆ’ ಬೇಡಿಕೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲು ಸಮ್ಮತಿ ಸಿಕ್ಕ ಬೆನ್ನಲ್ಲೇ ಬ್ಯಾಂಕ್ ಒಕ್ಕೂಟದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪರಿಣಾಮವಾಗಿ, ಇಂದಿನಿಂದ (ಸೆ.28) ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳು ತೆರೆದಿರಲಿದ್ದು, ಚೆಕ್ ಕ್ಲಿಯರೆನ್ಸ್ ಹಾಗೂ ನಗದು ವಹಿವಾಟು ಸೇರಿದಂತೆ ಎಲ್ಲಾ ಭೌತಿಕ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರಲಿವೆ.

ಬೆಂಗಳೂರು: ಇಂದಿನಿಂದ (ಸೆ.28ರಿಂದ) ಸೆ.30ರವರೆಗೆ ರಾಷ್ಟ್ರವ್ಯಾಪಿ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್ ಮುಷ್ಕರ ಕೊನೆ ಕ್ಷಣದಲ್ಲಿ ಮುಂದೂಡಲಾಗಿದೆ.ಈ ಹಿನ್ನಲೆಯಲ್ಲಿ ಇಂದು ಎಲ್ಲಾ ಬ್ಯಾಂಕ್‌ಗಳ ಕಚೇರಿ ಸೇವೆಗಳು ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸಲಿದೆ.
3 ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿ ಬ್ಯಾಂಕ್ ಒಕ್ಕೂಟ ನಿರ್ಧಾರ
ಸೆ.28ರಿಂದ ಸೆ.30ರವರೆಗೆ ದೇಶಾದ್ಯಂತ ನಡೆಯಬೇಕಿದ್ದ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಭಾನುವಾರ(ಸೆ.27ರಂದು) ತಡರಾತ್ರಿ ಹೇಳಿಕೆ ಬಿಡುಗಡೆ ಮಾಡಿದೆ. ಮುಷ್ಕರಕ್ಕೆ ಕಾರಣವಾಗಿದ್ದ ವಾರದ ಪ್ರತಿ ಶನಿವಾರವೂ ಬ್ಯಾಂಕ್‌ಗಳಿಗೆ ರಜೆ ಘೋಷಿಸುವ ಕುರಿತು ದೀರ್ಘಕಾಲದಿಂದ ಬ್ಯಾಂಕ್ ಒಕ್ಕೂಟಗಳು ಹೊಂದಿದ್ದ ಬೇಡಿಕೆಯ ಕುರಿತು ಭಾನುವಾರ ತಡರಾತ್ರಿ 9:30ರ ಸುಮಾರಿಗೆ ಬ್ಯಾಂಕ್‌ಗಳ ಒಕ್ಕೂಟ ಹಾಗೂ ಭಾರತೀಯ ಬ್ಯಾಂಕುಗಳ ಸಂಘ (IBA) ಸಭೆ ನಡೆಸಿದ್ದು, ಈ ಬೇಡಿಕೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಒಪ್ಪಿಗೆ ಸಿಗುತ್ತಿದ್ದಂತೆ ಬ್ಯಾಂಕ್ ಒಕ್ಕೂಟಗಳು ತಮ್ಮ ಉದ್ದೇಶಿತ 3 ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಮುಂದೂಡಿವೆ.
IBA ಜೊತೆ ಲಾಸ್ಟ್ ಮಿನಿಟ್ ಮೀಟಿಂಗ್ ಬೆನ್ನಲ್ಲೇ ಮಹತ್ವದ ನಿರ್ಧಾರ
ಈ ಕುರಿತು UFBU ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ಎಲ್ಲಾ ಶನಿವಾರಗಳನ್ನು ರಜಾದಿನಗಳಾಗಿ ಘೋಷಿಸುವ ಬೇಡಿಕೆ ಪರಿಶೀಲನೆಯನ್ನು IBA-UFBU ಸಮಿತಿಯು ತಕ್ಷಣವೇ ಕೈಗೆತ್ತಿಕೊಳ್ಳಲಿದ್ದು, ಈ ಕುರಿತಂತೆ ಸಂಭವನೀಯ ಪರ್ಯಾಯಗಳನ್ನು ಪರಿಶೀಲಿಸುತ್ತದೆ ಮತ್ತು ಸಂಬಂಧಪಟ್ಟ ಎಲ್ಲರಿಗೂ, ವಿಶೇಷವಾಗಿ ಗ್ರಾಹಕರಿಗೆ ಸ್ವೀಕಾರಾರ್ಹ ಪರಿಹಾರವನ್ನು ರೂಪಿಸಲು ಪಾಲುದಾರರೊಂದಿಗೆ ಸಮಾಲೋಚಿಸಲಿದೆ.
ಅಷ್ಟೇ ಅಲ್ಲದೆ, ಸಭೆಯಲ್ಲಿ ಸ್ಕೇಲ್ IV ಮತ್ತು ಅದಕ್ಕಿಂತ ಹೆಚ್ಚಿನ ಅಧಿಕಾರಿಗಳ PLI ಯೋಜನೆಯನ್ನು ಬದಲಾಯಿಸುವ ಕುರಿತು IBAಯೊಂದಿಗೆ ಮಾತುಕತೆ ಪ್ರಾರಂಭವಾಗಲಿದ್ದು, IBA ಈ ಕುರಿತಂತೆ ಮಾರ್ಪಾಡುಗಳ ಕುರಿಂತೆ ಸರ್ಕಾರದೊಂದಿಗೆ ಪ್ರಸ್ತಾವನೆ ನಡೆಸಲಿದೆ. ಇದರ ಜೊತೆಗೆ 2024ರ ಮಾರ್ಚ್ 8ರಂದು ನಡೆದ ಸಭೆಯ ಮಿನಿಟ್ಸ್ ಆಫ್ ಮೀಟಿಂಗ್‌ನಲ್ಲಿ ಚರ್ಚಿಸಲಾಗಿರುವ ಇತರೆ ಸಮಸ್ಯೆಗಳ ಕುರಿತು ಪುನರ್‌ಚರ್ಚಿಸಲಿದ್ದು, ಇದನ್ನು ಶೀಘ್ರದಲ್ಲೇ ಇತ್ಯರ್ಥಪಡಿಸಲು ಉಭಯ ಪಕ್ಷಗಳು ಒಪ್ಪಿಗೆ ನೀಡಿವೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಆರ್. ಶೇಖರನ್ “ಸಭೆಯಲ್ಲಿ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯ ಬೇಡಿಕೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು IBA ಒಪ್ಪಿಕೊಂಡಿದೆ. ಈ ಉನ್ನತ ಮಟ್ಟದ ಸಮಿತಿಯಲ್ಲಿ ಬ್ಯಾಂಕ್ ಯೂನಿಯನ್‌ಗಳ ಯುನೈಟೆಡ್ ಫೋರಮ್‌ನ ಪ್ರತಿನಿಧಿಗಳು ಸಹ ಭಾಗವಾಗಿಯಾಗಲಿದ್ದು, ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಸಮಿತಿಯು ಈ ಬೇಡಿಕೆಯ ಬಗ್ಗೆ ಚರ್ಚಿಸುತ್ತದೆ” ಎಂದು ತಿಳಿಸಿದ್ದಾರೆ.
ಇಂದು ಬ್ಯಾಂಕ್ ಓಪನ್ ಇರಲಿವೆ
ಹೀಗೆ IBAಯೊಂದಿಗಿನ ಕೊನೆ ಕ್ಷಣದ ಮೀಟಿಂಗ್ ಬಳಿಕ ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್ ಮುಷ್ಕರವನ್ನು ಕೈಬಿಡಲು ಬ್ಯಾಂಕ್ ಒಕ್ಕೂಟಗಳು ನಿರ್ಧರಿಸಿರುವುದರಿಂದ ಸದ್ಯ ಬ್ಯಾಂಕ್‌ಗಳು ಓಪನ್ ಇರಲಿದ್ದು, ಎಂದಿನಂತೆ ಸೇವೆಗಳು ಲಭಿಸಲಿವೆ. ಹಾಗಾಗಿ ಗ್ರಾಹಕರು ಎಂದಿನಂತೆ ಸಾಮಾನ್ಯವಾಗಿ ಬ್ಯಾಂಕ್ ಶಾಖೆಗಳಿಗೆ ತೆರಳಿ ಚೆಕ್ ಕ್ಲಿಯರೆನ್ಸ್, ನಗದು ಹಿಂಪಡೆಯುವಿಕೆ ಮತ್ತು ಠೇವಣಿಗಳಂತಹ ಭೌತಿಕ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ.