ಬೆಳ್ತಂಗಡಿ: ಚಾರ್ಮಾಡಿ-ಉಜಿರೆ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ; 6 ಮಂದಿಗೆ ಗಂಭೀರ ಗಾಯ!

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಸೀಟ್ ಕಾಡ್ ಬಳಿ ಚಾರ್ಮಾಡಿ-ಉಜಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಿಗ್ಗೆ ಎರಡು ಕಾರುಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಆರು ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಭೀಕರ ಅಪಘಾತದಲ್ಲೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಗಾಯಗೊಂಡವರನ್ನು ಮಂಗಳೂರು ಕಾವೂರು ಮೂಲದವರಾದ ವಿನಿತಾ (22), ಗೌರಮ್ಮ (49) ಮತ್ತು ಕೊಟ್ರೆಗೌಡ (55) ಹಾಗೂ ಯಾದಗಿರಿ ಜಿಲ್ಲೆಯ ಸುರಪುರ ಮೂಲದವರಾದ ಭೀಮಣ್ಣ (65), ಶ್ರೀನಿವಾಸ (32) ಮತ್ತು ಶಶಿಧರ (33) ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳು ಮುಖಾಮುಖಿ ಡಿಕ್ಕಿಯಾಗುತ್ತಿದ್ದಂತೆ ಭಾರಿ ಶಬ್ದ ಕೇಳಿಬಂದಿದ್ದು, ತಕ್ಷಣವೇ ಸ್ಥಳೀಯ ನಿವಾಸಿಗಳು ಹಾಗೂ ರಸ್ತೆಯಲ್ಲಿ ಚಲಿಸುತ್ತಿದ್ದ ಇತರ ವಾಹನ ಸವಾರರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನೆರವಾಗಿದ್ದಾರೆ. ಕಾರಿನೊಳಗೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಜಾಗರೂಕತೆಯಿಂದ ಹೊರಗೆ ತೆಗೆದು, ತಕ್ಷಣವೇ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಎರಡೂ ಕಾರುಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಅಪಘಾತದ ತೀವ್ರತೆಗೆ ಸಾಕ್ಷಿಯಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆದ್ದಾರಿಯಲ್ಲಿ ಕೆಲಕಾಲ ಉಂಟಾಗಿದ್ದ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.