“ಬಂಟ್ವಾಳ: ಬಿ.ಸಿ. ರೋಡ್‌ನಲ್ಲಿ ಟಿಪ್ಪರ್ ಲಾರಿ ಡಿಕ್ಕಿ; ಸ್ಕೂಟರ್ ಸವಾರ ಸಾ*ವು, ಮತ್ತೊಬ್ಬನ ಸ್ಥಿತಿ ಗಂಭೀರ!

ಬಂಟ್ವಾಳ: ಬಂಟ್ವಾಳ ತಾಲೂಕಿನ ಎನ್. ಜಿ. ಸರ್ಕಲ್ ಬಳಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇವರ ಪೈಕಿ ಸಹಸವಾರ ಮೃತಪಟ್ಟಿದ್ದಾರೆ.ಮೃತರನ್ನು ಯಶವಂತ್ ಕುಲಾಲ್ ಎಂದು ಗುರುತಿಸಲಾಗಿದ್ದು, ತೀವ್ರವಾಗಿ ಗಾಯಗೊಂಡ ಸವಾರ ದಯಾನಂದ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಅಗಸ್ಟ್ 6 ರಂದು ಸಂಜೆ 6:30 ರ ಸುಮಾರಿಗೆ ಕಲ್ಲಡ್ಕ ಕಡೆಯಿಂದ ಲೊರೆಟ್ಟೊ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿ ಮಂಗಳೂರು ಕಡೆಯಿಂದ ಧರ್ಮಸ್ಥಳ ಕಡೆಗೆ ಸಹ ಸವಾರನನ್ನು ಕುಳ್ಳಿರಿಸಿಕೊಂಡು ತೆರಳುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಸವಾರ ದಯಾನಂದ ಹಾಗೂ ಸಹ ಸವಾರ ಯಶ್ವಂತ್ ಕುಲಾಲ್ ಎಂಬವರುಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾ ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತ್ತು. ಗಾಯಾಳುಗಳ ಪೈಕಿ ಸಹಸವಾರ ಯಶ್ವಂತ್ ಕುಲಾಲ್ ರವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದು, ದಯಾನಂದ ರವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 281, 125 (ಎ), ಮತ್ತು 106 (1) ಅಡಿಯಲ್ಲಿ ಅಪರಾಧ ಸಂಖ್ಯೆ 99/2026 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಟಿಪ್ಪರ್ ಚಾಲಕ ಬಂಟ್ವಾಳ ಪಲ್ಲಮಜಲು ನಿವಾಸಿ ಸಲ್ಮಾನ್ ಫಾರುಕ್ (33) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.