ಚೀಸ್ ಬಾಲ್ ತಯಾರಿಕಾ ಘಟಕದಲ್ಲಿ ಹೆಗ್ಗಣಗಳ ಹಾವಳಿ! ಬೈಕಂಪಾಡಿಯ ಫಾರ್ಚುನ್ ಇಂಡಸ್ಟ್ರೀಸ್ಗೆ ಬೀಗ

ಮಂಗಳೂರು: ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಸುರತ್ಕಲ್ ವ್ಯಾಪ್ತಿಯಲ್ಲಿ ಅನಿರೀಕ್ಷಿತ ದಾಳಿ ನಡೆಸಿದ್ದಾರೆ. ತೀವ್ರ ಅನೈರ್ಮಲ್ಯ ಕಂಡುಬಂದ ಹಿನ್ನೆಲೆಯಲ್ಲಿ ಬೈಕಂಪಾಡಿಯ ಆಹಾರ ತಯಾರಿಕಾ ಘಟಕವೊಂದನ್ನು ಸೀಜ್ ಮಾಡಲಾಗಿದ್ದು, ಸುರತ್ಕಲ್ನ ಮೆಕ್ಡೊನಾಲ್ಡ್ಸ್ ರೆಸ್ಟೋರೆಂಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ‘ಫಾರ್ಚುನ್ ಇಂಡಸ್ಟ್ರೀಸ್’ ಘಟಕದಲ್ಲಿ ಚೀಸ್ ಬಾಲ್ ಸ್ನಾಕ್ಸ್ ತಯಾರಿಸಲಾಗುತ್ತಿತ್ತು. ತಪಾಸಣೆ ವೇಳೆ ತಯಾರಿಕಾ ಘಟಕದಲ್ಲಿ ಹೆಗ್ಗಣಗಳು ಓಡಾಡುತ್ತಿರುವುದು ಹಾಗೂ ತೀವ್ರ ಅನೈರ್ಮಲ್ಯ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಘಟಕಕ್ಕೆ ಸೀಲ್ ಮಾಡಿ ಸೀಜ್ ಮಾಡಿದ್ದಾರೆ. ಇದೇ ವೇಳೆ ಸುರತ್ಕಲ್ನಲ್ಲಿರುವ ಮೆಕ್ಡೊನಾಲ್ಡ್ಸ್ ರೆಸ್ಟೋರೆಂಟ್ನ ಅಡುಗೆ ಕೋಣೆಯಲ್ಲಿ ನೈರ್ಮಲ್ಯದ ಕೊರತೆ ಕಂಡುಬಂದ ಕಾರಣ ಇಲಾಖೆಯಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರ ಸೂಚನೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ವಿಶೇಷ ತಪಾಸಣಾ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಿ ಸುರತ್ಕಲ್ ಭಾಗದ ವಿವಿಧ ಹೋಟೆಲ್ಗಳು, ವಾಣಿಜ್ಯ ಮಳಿಗೆಗಳು ಮತ್ತು ಆಹಾರ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಲಾಯಿತು.