ಅರ್ಜೆಂಟೀನಾದ ರೋಚಕ ಜಯ: ಈಜಿಪ್ಟ್ ಮಣಿಸಿ ವಿಶ್ವಕಪ್ ಕ್ವಾರ್ಟರ್ ಫೈನಲ್ಗೆ ಲಗ್ಗೆ!

ಅಟ್ಲಾಂಟ: ಎರಡು ಗೋಲುಗಳ ಹಿನ್ನಡೆಯಿಂದ ಕೊನೆಯ ಕ್ಷಣಗಳಲ್ಲಿ ಅದ್ಭುತವಾಗಿ ಪುಟಿದೆದ್ದ ಹಾಲಿ ಚಾಂಪಿಯನ್ ಅರ್ಜೆಂಟೀನ ತಂಡ, ಈಜಿಪ್ಟ್ ವಿರುದ್ಧ 3-2 ಗೋಲುಗಳ ರೋಚಕ ಗೆಲುವು ದಾಖಲಿಸಿ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿತು.
ಮಂಗಳವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 79ನೇ ನಿಮಿಷದವರೆಗೆ 0-2 ಗೋಲುಗಳ ಹಿನ್ನಡೆಯಲ್ಲಿದ್ದ ಅರ್ಜೆಂಟೀನ, ನಂತರ ಸತತ ಮೂರು ಗೋಲುಗಳನ್ನು ಗಳಿಸಿ ಪಂದ್ಯವನ್ನು ತನ್ನ ಪರ ತಿರುಗಿಸಿಕೊಂಡಿತು.
ಪಂದ್ಯದ 15ನೇ ನಿಮಿಷದಲ್ಲಿ ಯಾಸೀರ್ ಇಬ್ರಾಹೀಂ ಗೋಲು ಗಳಿಸಿ ಈಜಿಪ್ಟ್ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಮೊದಲಾರ್ಧದಲ್ಲಿ ಅರ್ಜೆಂಟೀನದ ನಾಯಕ ಲಿಯೊನೆಲ್ ಮೆಸ್ಸಿಗೆ ದೊರೆತ ಪೆನಾಲ್ಟಿ ಅವಕಾಶ ಕೈತಪ್ಪಿತು.

67ನೇ ನಿಮಿಷದಲ್ಲಿ ಮುಸ್ತಾಫಾ ಝಿಕೊ ಗೋಲು ಗಳಿಸುವ ಮೂಲಕ ಈಜಿಪ್ಟ್ ತಂಡ ತನ್ನ ಮುನ್ನಡೆಯನ್ನು 2-0ಕ್ಕೆ ಹೆಚ್ಚಿಸಿ ಅರ್ಜೆಂಟೀನವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿತು.
ಆದರೆ 79ನೇ ನಿಮಿಷದಲ್ಲಿ ಕ್ರಿಸ್ಟಿಯನ್ ರೊಮೆರೊ ಗೋಲು ಗಳಿಸುವ ಮೂಲಕ ಅರ್ಜೆಂಟೀನದ ಪುನರಾಗಮನಕ್ಕೆ ನಾಂದಿ ಹಾಡಿದರು. ನಾಲ್ಕು ನಿಮಿಷಗಳ ಬಳಿಕ 83ನೇ ನಿಮಿಷದಲ್ಲಿ ಲಿಯೊನೆಲ್ ಮೆಸ್ಸಿ ಗೋಲು ದಾಖಲಿಸಿ ಸ್ಕೋರನ್ನು 2-2ರಿಂದ ಸಮಬಲಗೊಳಿಸಿದರು.
ಹೆಚ್ಚುವರಿ ಅವಧಿಯ ಮೂರನೇ ನಿಮಿಷದಲ್ಲಿ (90+3) ಎಂ ಫೆರ್ನಾಂಡಿಸ್ ಹೆಡರ್ ಮೂಲಕ ನಿರ್ಣಾಯಕ ಗೋಲು ಗಳಿಸಿ ಅರ್ಜೆಂಟೀನಗೆ 3-2 ಗೋಲುಗಳ ರೋಚಕ ಗೆಲುವು ತಂದುಕೊಟ್ಟರು.
ಈ ಜಯದೊಂದಿಗೆ ಹಾಲಿ ಚಾಂಪಿಯನ್ ಅರ್ಜೆಂಟೀನ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿತು.
ಮೊದಲಾರ್ಧದಲ್ಲಿ ಪೆನಾಲ್ಟಿ ಅವಕಾಶವನ್ನು ಕೈಚೆಲ್ಲಿದ ಬಳಿಕವೂ ಗೋಲು ದಾಖಲಿಸಿದ ನಾಲ್ಕನೇ ಆಟಗಾರ ಎಂಬ ಸಾಧನೆಯನ್ನು ಲಿಯೊನೆಲ್ ಮೆಸ್ಸಿ ತಮ್ಮ ಹೆಸರಿಗೆ ಬರೆದುಕೊಂಡರು. ಅಲ್ಲದೆ, ಪ್ರಸಕ್ತ ಟೂರ್ನಿಯಲ್ಲಿ ತಮ್ಮ ಎಂಟನೇ ಗೋಲು ದಾಖಲಿಸಿ ಮಿಂಚಿದರು.