ಧರ್ಮದ ಗಡಿ ಮೀರಿದ ಸ್ನೇಹಕ್ಕೆ ಸಲಾಂ; ಮುಸ್ಲಿಂ ಗೆಳೆಯನ ಮಗನಿಗಾಗಿ ಶಬರಿಮಲೆಗೆ ಹಿಂದೂ ಸ್ನೇಹಿತನ ಪಾದಯಾತ್ರೆ

ಕೇರಳ : ಧರ್ಮದ ಎಲ್ಲೆಗಳನ್ನು ಮೀರಿದ ಸ್ನೇಹ, ನಂಬಿಕೆ ಮತ್ತು ಕೃತಜ್ಞತೆಯ ಅಪರೂಪದ ಘಟನೆಯೊಂದಕ್ಕೆ ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ನ ಸಾಕ್ಷಿಯಾಗಿದೆ. ತಮ್ಮ ಆಪ್ತ ಮುಸ್ಲಿಂ ಸ್ನೇಹಿತನ ಮಗ ಭೀಕರ ರಸ್ತೆ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡ ಸಂದರ್ಭ ಹೊತ್ತಿದ್ದ ಹರಕೆಯನ್ನು ತೀರಿಸಲು ಇದೀಗ ಹಿಂದೂ ಸ್ನೇಹಿತ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಪ್ರಮೋದ್ ಎಂಬುವವರು ಹರಕೆಯನ್ನು ತೀರಿಸಲು ಪೆರಿಂಥಲ್ಮನ್ನದಿಂದ ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.ವಿಶೇಷವೆಂದರೆ, ಪ್ರಮೋದ್ ಅವರ ಆಪ್ತ ಗೆಳೆಯ ನಜರ್ ಮನು ಅವರು ಪ್ರಮೋದ್ ಅವರ ತಲೆಯ ಮೇಲೆ ಪವಿತ್ರ ‘ಇರುಮುಡಿ ಕಟ್ಟು’ ಇರಿಸುವ ಮೂಲಕ ಈ ಭಾವೈಕ್ಯತೆಯ ತೀರ್ಥಯಾತ್ರೆಗೆ ಚಾಲನೆ ನೀಡಿದರು.
ಸುಮಾರು ಏಳು ತಿಂಗಳ ಹಿಂದೆ, ನಜರ್ ಮನು ಅವರ 20 ವರ್ಷದ ಪುತ್ರ ಹಮ್ದಾನ್ ಪ್ರಯಾಣಿಸುತ್ತಿದ್ದ ಬೈಕ್ಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಹಮ್ದಾನ್ ತೀವ್ರವಾಗಿ ಗಾಯಗೊಂಡು ಪಾರ್ಶ್ವವಾಯುವಿಗೆ (Paralysis) ತುತ್ತಾಗಿದ್ದರು. ಆರಂಭದಲ್ಲಿ ಆತನ ಸ್ಥಿತಿ ಕಂಡಿದ್ದ ವೈದ್ಯರು, ಹಮ್ದಾನ್ ಮತ್ತೆ ಸಾಮಾನ್ಯ ಜೀವನಕ್ಕೆ ಮರಳುವ ಬಗ್ಗೆ ಯಾವುದೇ ಭರವಸೆ ನೀಡಿರಲಿಲ್ಲ.ಕಳೆದ 16 ವರ್ಷಗಳಿಂದ ನಜರ್ ಅವರ ಆಪ್ತ ಒಡನಾಡಿಯಾಗಿರುವ ಪ್ರಮೋದ್, ತಮ್ಮ ಗೆಳೆಯನ ಕುಟುಂಬ ಎದುರಿಸುತ್ತಿದ್ದ ಸಂಕಷ್ಟವನ್ನು ಕಂಡು ಮರುಗಿದ್ದರು. ಹಮ್ದಾನ್ ಸಂಪೂರ್ಣವಾಗಿ ಗುಣಮುಖನಾಗಲಿ ಎಂದು ಪ್ರಾರ್ಥಿಸಿದ್ದ ಪ್ರಮೋದ್, ಆತ ಚೇತರಿಸಿಕೊಂಡರೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಪಾದಯಾತ್ರೆ ಮಾಡುವುದಾಗಿ ಹರಕೆ ಹೊತ್ತಿದ್ದರು. ತಿಂಗಳುಗಳ ನಿರಂತರ ಚಿಕಿತ್ಸೆ ಹಾಗೂ ಪ್ರಾರ್ಥನೆಯ ಫಲವಾಗಿ ಹಮ್ದಾನ್ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಇದೀಗ ಮತ್ತೆ ನಡೆಯಲು ಆರಂಭಿಸಿದ್ದಾರೆ. ಗೆಳೆಯನ ಮಗನ ಈ ಚೇತರಿಕೆಗೆ ಕೃತಜ್ಞತೆಯ ಸಂಕೇತವಾಗಿ ಪ್ರಮೋದ್ ಅವರು ತಮ್ಮ ಇತರ ಕೆಲವು ಸ್ನೇಹಿತರೊಂದಿಗೆ ಸೇರಿ ಶಬರಿಮಲೆ ಬೆಟ್ಟದ ದೇಗುಲಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸೌಹಾರ್ದಯುತ ಯಾತ್ರೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
