ಮಂಗಳೂರು: ಕಂಕನಾಡಿಯಲ್ಲಿ ಶಾಲೆ ಬಿಟ್ಟು ರಸ್ತೆ ದಾಟುತ್ತಿದ್ದ 2ನೇ ತರಗತಿ ಬಾಲಕನ ಮೇಲೆ ಹರಿದ ಖಾಸಗಿ ಬಸ್ – 7 ವರ್ಷದ ಪುಟ್ಟ ಕಂದಮ್ಮ ದಾರುಣ ಸಾ*ವು!”

ಮಂಗಳೂರು : ಶಾಲೆ ಮುಗಿಸಿ ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ 2ನೇ ತರಗತಿಯ ಬಾಲಕನ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ 7 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ನಗರದ ಕಂಕನಾಡಿಯಲ್ಲಿ ನಡೆದಿದೆ. ಲಕ್ಷ್ಮೀ ಕಲಹಾಲ ಎಂಬುವವರ 7 ವರ್ಷದ ಪುತ್ರ ಮೃತಪಟ್ಟ ದುರ್ದೈವಿ ಬಾಲಕ. ಈತ ಕಂಕನಾಡಿಯ ಸೈಂಟ್ ಜೋಸೆಫ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

ನವೆಂಬರ್ 25ರಂದು ಸಂಜೆ 4.15ರ ಸುಮಾರಿಗೆ ಶಾಲೆ ಬಿಟ್ಟ ಬಳಿಕ ಬಾಲಕ ಮನೆಗೆ ತೆರಳಲು ಶಾಲೆಯ ಮುಂಭಾಗದ ಕಂಕನಾಡಿ–ಫಳ್ನೀರ್ ರಸ್ತೆಯನ್ನು ದಾಟುತ್ತಿದ್ದ. ಈ ವೇಳೆ ಫಳ್ನೀರ್ ಕಡೆಗೆ ಹೋಗಲು ನಿಂತಿದ್ದ ಖಾಸಗಿ ಬಸ್ನ ಚಾಲಕ, ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಬಸ್ಸನ್ನು ಒಮ್ಮೆಲೇ ಬಲಕ್ಕೆ ತಿರುಗಿಸಿ ಚಲಾಯಿಸಿದ್ದಾನೆ.
ಪರಿಣಾಮ ಬಸ್ಸಿನ ಬಲಭಾಗ ಬಾಲಕನಿಗೆ ಬಡಿದಿದ್ದು, ರಸ್ತೆಗೆ ಎಸೆಯಲ್ಪಟ್ಟ ಬಾಲಕನ ಮೇಲೆ ಬಸ್ಸಿನ ಬಲ ಹಿಂಬದಿಯ ಚಕ್ರ ಹರಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಬಸ್ ಚಾಲಕ ಹಾಗೂ ಸ್ಥಳೀಯರು ತಕ್ಷಣವೇ ಸಮೀಪದ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಂಭೀರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಸಂಜೆ 5.50ರ ಸುಮಾರಿಗೆ ಕೊನೆಯುಸಿರೆಳೆದಿದ್ದಾನೆ. ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಪುತ್ರನ ಸಾವಿಗೆ ಕಾರಣನಾದ ಬಸ್ ಚಾಲಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಬಾಲಕನ ತಾಯಿ ಲಕ್ಷ್ಮೀ ಕಲಹಾಲ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.