ರೈಲು ಪ್ರಯಾಣಿಕರೇ ಎಚ್ಚರ! ಮೊಬೈಲ್ ಕದ್ದು ₹19,847 ಹಣ ವರ್ಗಾಯಿಸಿಕೊಂಡ ಆರೋಪಿ ಬಂಧನ

ಬೈಂದೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಮೊಬೈಲ್ ಫೋನ್ ಕಳವು ಮಾಡಿ, ಅದರಲ್ಲಿದ್ದ ಯುಪಿಐ (UPI) ಆ್ಯಪ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಕಳವು ಮಾಡಲಾಗಿದ್ದ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾಸ್ತಾನ ಐರೋಡಿ ಗ್ರಾಮದ ಗೋಳಿಬೆಟ್ಟು ನಿವಾಸಿ ಪ್ರಹ್ಲಾದ್ (32) ಬಂಧಿತ ಆರೋಪಿ.ಕಳೆದ ಆಗಸ್ಟ್ 2ರಂದು ರೊಬಿನ್ ಫೆರ್ನಾಂಡಿಸ್ ಎಂಬುವವರು ಮಂಗಳೂರಿನಿಂದ ಮಡಗಾಂವ್‌ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗಿನ ಜಾವ ಸುಮಾರು 2 ಗಂಟೆಯ ವೇಳೆಗೆ ರೈಲು ಬೈಂದೂರು ನಿಲ್ದಾಣದ ಬಳಿ ತಲುಪಿದ್ದಾಗ, ಅವರಲ್ಲಿದ್ದ 17,000 ಮೌಲ್ಯದ ಮೊಬೈಲ್ ಫೋನ್ ಕಳವಾಗಿತ್ತು. ಅಷ್ಟೇ ಅಲ್ಲದೆ, ಆರೋಪಿಯು ಕಳವು ಮಾಡಿದ ಮೊಬೈಲ್‌ನ ಯುಪಿಐ ಮೂಲಕ ಒಟ್ಟು 19,847 ಹಣವನ್ನು ಅಕ್ರಮವಾಗಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿಚಾರಣೆ ವೇಳೆ ಆರೋಪಿ ಪ್ರಹ್ಲಾದ್, ತನ್ನ ಸಹಚರ ಜೋಶಿ ನಾರಾಯಣ ನಾಯಕ್ ಎಂಬಾತನ ಜೊತೆ ಸೇರಿ ಬೈಂದೂರು ಸಮೀಪ ಆಗಸ್ಟ್ 2, ಅಕ್ಟೋಬರ್ 13 ಹಾಗೂ ಮಾರ್ಚ್ 6ರಂದು ರೈಲು ಪ್ರಯಾಣಿಕರ ಮೊಬೈಲ್‌ಗಳನ್ನು ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಬಂಧಿತ ಪ್ರಹ್ಲಾದ್ ವಿರುದ್ಧ ಈಗಾಗಲೇ ಕಾರವಾರ ಗ್ರಾಮೀಣ, ಬಂಟ್ವಾಳ ನಗರ, ಉಡುಪಿ ನಗರ, ಬ್ರಹ್ಮಾವರ, ಕೋಟ ಹಾಗೂ ಕುಂದಾಪುರ ನಗರ ಪೊಲೀಸ್ ಠಾಣೆಗಳಲ್ಲಿ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
