ಪಡೀಲ್ ರೈಲ್ವೆ ಸೇತುವೆ ಬಳಿ ಡ್ರಗ್ಸ್ ದಂಧೆ: ಇಬ್ಬರು ಪೆಡ್ಲರ್ಗಳು ಅರೆಸ್ಟ್

ಮಂಗಳೂರು : ನಗರದ ಪಡೀಲ್ ರೈಲ್ವೆ ಸೇತುವೆ ಸಮೀಪ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ LSD ಮಾದಕ ವಸ್ತುವನ್ನು ಇಟ್ಟುಕೊಂಡಿದ್ದ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಮಂಗಳೂರು ಸಿಸಿಬಿ (CCB) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಸುಮಾರು ₹3,00,000/- (ಮೂರು ಲಕ್ಷ ರೂಪಾಯಿ) ಮೌಲ್ಯದ ಭಾರಿ ಪ್ರಮಾಣದ LSD ಬ್ಲಾಟ್ಗಳು ಹಾಗೂ ಆಟೋ/ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರಿನ ನಿವಾಸಿಗಳಾದ ನಿಹಾಲ್ ಸ್ಯಾಂಪ್ರೆಸ್ ರೋಡ್ರಿಗಸ್ (30), ಸಿದ್ದಾರ್ಥ ಶೆಟ್ಟಿ (35) ಎಂದು ಗುರುತಿಸಲಾಗಿದೆ.ಮಂಗಳೂರು ನಗರ ಸಿಸಿಬಿ ಘಟಕದ ಪೊಲೀಸ್ ಉಪನಿರೀಕ್ಷಕ (PSI) ಹರೀಶ್ ಎಂ.ಆರ್ ಅವರಿಗೆ ನವೆಂಬರ್ 3 ರಂದು ಮಧ್ಯಾಹ್ನ 1:30 ಗಂಟೆಯ ಸುಮಾರಿಗೆ ಖಚಿತ ಬಾತ್ಮೀದಾರರಿಂದ ಮಾಹಿತಿ ಲಭಿಸಿತ್ತು. ಪಡೀಲ್ ರೈಲ್ವೆ ಸೇತುವೆ ಬಳಿ ವೀರನಗರಕ್ಕೆ ಹೋಗುವ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತು ಮಾರಾಟಕ್ಕೆ ಸಂಚು ರೂಪಿಸಿದ್ದಾರೆ ಎಂಬ ಸುಳಿವು ಸಿಕ್ಕ ತಕ್ಷಣ ಸಿಸಿಬಿ ಪಡೆ ಸ್ಥಳಕ್ಕೆ ದಾಳಿ ನಡೆಸಿತ್ತು. ಸ್ಥಳದಲ್ಲಿದ್ದ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಅವರಿಂದ ಭಾರಿ ಪ್ರಮಾಣದ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿದೆ.

ಆರೋಪಿ-1 (ನಿಹಾಲ್ ರೋಡ್ರಿಗಸ್): ಈತನ ವಶದಲ್ಲಿದ್ದ ಪ್ಲಾಸ್ಟಿಕ್ ಜಿಪ್ ಪ್ಯಾಕೆಟ್ನಲ್ಲಿ ₹1,50,000/- ಮೌಲ್ಯದ, ಒಟ್ಟು 1.02 ಗ್ರಾಂ ತೂಕದ 50 LSD Blot ಗಳಿದ್ದ 3 ಎಲ್ಎಸ್ಡಿ ಶೀಟ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ₹15,000/- ಮೌಲ್ಯದ ನೀಲಿ ಬಣ್ಣದ Samsung Galaxy A17 5G ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಆರೋಪಿ-2 (ಸಿದ್ದಾರ್ಥ ಶೆಟ್ಟಿ): ಈತನಿಂದ ₹1,50,000/- ಮೌಲ್ಯದ, ಒಟ್ಟು 1.05 ಗ್ರಾಂ ತೂಕದ 50 LSD Blot ಗಳಿದ್ದ 2 ಎಲ್ಎಸ್ಡಿ ಶೀಟ್ಗಳು (ಕಾರ್ಡ್ಬೋರ್ಡ್ ಬಾಕ್ಸ್ನಲ್ಲಿಟ್ಟಿದ್ದ), ₹10,000/- ಬೆಲೆಯ OPPO F33 Pro 5G ಹಾಗೂ ₹10,000/- ಬೆಲೆಯ Vivo Y300 5G ಮೊಬೈಲ್ ಫೋನ್ಗಳನ್ನು ಸೀಜ್ ಮಾಡಲಾಗಿದೆ.
ಸಿಸಿಬಿ ಪೊಲೀಸರು ಒಟ್ಟಾರೆಯಾಗಿ 2.07 ಗ್ರಾಂ ತೂಕದ 100 LSD Blot ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹಣ ಮಾಡುವ ದುರುದ್ದೇಶದಿಂದ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರೂ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಮಹಜರು ಪ್ರಕ್ರಿಯೆ ಮುಗಿಸಿ ಮುಂದಿನ ಕಾನೂನು ಕ್ರಮಕ್ಕಾಗಿ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿಗಳ ವಿರುದ್ಧ NDPS ಕಾಯ್ದೆ ಹಾಗೂ BNS 2023 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ನೆಟ್ವರ್ಕ್ನ ಹಿಂದೆ ಇರುವ ಪ್ರಮುಖ ಡ್ರಗ್ ಪೂರೈಕೆದಾರರ ಪತ್ತೆಗೆ ಕಂಕನಾಡಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.