ಕರಾವಳಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ: ದಕ್ಷಿಣ ಕನ್ನಡದ ಮೂವರು ಸಾಧಕರಿಗೆ ಗೌರವ!

ಮಂಗಳೂರು: ದ.ಕ.ಜಿಲ್ಲೆಯ ವಿಶ್ವನಾಥ್ ಸುವರ್ಣ (ಮಾಧ್ಯಮ/ಛಾಯಾಚಿತ್ರ), ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ (ಸಮಾಜ ಸೇವೆ), ಡಾ. ಇಂದಿರಾ ಹೆಗಡೆ (ಸಾಹಿತ್ಯ) ಸಹಿತ ರಾಜ್ಯದ 71 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.ಮಂಗಳೂರಿನಲ್ಲಿ ಜನಿಸಿದ್ದ ವಿಶ್ವನಾಥ ಸುವರ್ಣ ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿಯಲ್ಲಿ ಸುಮಾರು 45 ವರ್ಷಗಳ ಕಾಲ ಪತ್ರಿಕಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದರು. ಕರುನಾಡಿನ ಕೋಟೆಗಳು ಮತ್ತು ಕನ್ನಡ ನಾಡಿನ ಬಣ್ಣದ ಬಾನಾಡಿಗಳು ಹಾಗೂ Ports of Karnataka ಎಂಬ ಕೃತಿಗಳನ್ನು ರಚಿಸಿರುವ ಇವರು ವೃತ್ತಿಜೀವನದಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾರ್ವಜನಿಕ ಜೀವನದ ಅನೇಕ ಮಹತ್ವದ ಘಟನೆಗಳನ್ನು ಕ್ಯಾಮೆರಾದಲ್ಲಿ ದಾಖಲಿಸಿದ್ದಾರೆ.

ಗಲಭೆ ಮತ್ತು ಸಂಘರ್ಷದಂತಹ ಸವಾಲಿನ ಸಂದರ್ಭಗಳಲ್ಲಿಯೂ ಧೈರ್ಯದಿಂದ ಕಾರ್ಯನಿರ್ವಹಿಸಿದ ಅನುಭವವಿದೆ. ರಾಜ್ಯದ 116 ಕೋಟೆಗಳ ಸಾಹಸಮಯ ಛಾಯಾಚಿತ್ರ ದಾಖಲೀಕರಿಸಿದ್ದಾರೆ. ಈ ಯೋಜನೆಗಾಗಿ 600ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಒಳಗೊಂಡ ಆಕರ್ಷಕ ಕಾಫಿ ಟೇಬಲ್ ಪುಸ್ತಕವನ್ನು ರೂಪಿಸಿದರು.
ಪ್ರಕೃತಿ ಮತ್ತು ಪಕ್ಷಿ ಛಾಯಾಗ್ರಹಣದಲ್ಲಿಯೂ ವಿಶೇಷ ಆಸಕ್ತಿ ಹೊಂದಿರುವ ಇವರು ಕನ್ನಡ ನಾಡಿನ ಬಣ್ಣದ ಬಾನಾಡಿಗಳು’ ಎಂಬ ಛಾಯಸಂಪುಟ ಕೃತಿಯನ್ನು ಪ್ರಕಟಿಸಿದ್ದಾರೆ. ಕರ್ನಾಟಕದ ಪಕ್ಷಿ ಪ್ರಪಂಚದ ವೈವಿಧ್ಯತೆ, ಬಣ್ಣಗಳು ಮತ್ತು ನಿಸರ್ಗದ ಸೌಂದರ್ಯವನ್ನು ಛಾಯಾಚಿತ್ರಗಳ ಮೂಲಕ ದಾಖಲಿಸಿರುವ ಈ ಕೃತಿ ಅವರ ಸೃಜನಶೀಲ ಛಾಯಾಗ್ರಹಣಕ್ಕೆ ಸಾಕ್ಷಿಯಾಗಿದೆ.ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದಲ್ಲಿ ಜನಿಸಿದ ಎ.ಸಿ.ಭಂಡಾರಿ ತುಳು ಭಾಷೆ, ಸಾಹಿತ್ಯ ಸಂಸ್ಕೃತಿ, ಧಾರ್ಮಿಕ, ರಾಜಕೀಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ಟೈಪ್ ರೈಟಿಂಗ್ ತರಬೇತಿ ಕೇಂದ್ರ ಆರಂಭಿಸಿ ಅದರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. ಜೊತೆಗೆ ರಂಗ ಕಲಾವಿದರ ನಂಟು ಬೆಳೆಸಿದರು. ಅಲ್ಲದೆ ‘ತುಳುಕೂಟವನ್ನು ಸ್ಥಾಪಿಸಿ ತುಳು ಭಾಷೆ, ಸಾಹಿತ್ಯದ ಅಭಿವೃದ್ಧಿಗಾಗಿ ಶ್ರಮಿಸಿದರು. ಅದಲ್ಲದೆ ಕಾಂಗ್ರೆಸ್ ಪಕ್ಷದಲ್ಲೂ ಗುರುತಿಸಿಕೊಂಡರು.
2000ನೆ ಇಸವಿಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ಕೆಪಿಸಿಸಿ ಕಿಸಾನ್ ಘಟಕದ ಸಹ ಅಧ್ಯಕ್ಷರಾಗಿ, ರಾಜ್ಯ ಖಾದಿ ಬೋರ್ಡ್ ನಿರ್ದೇಶಕರಾಗಿ, ದ.ಕ.ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. 2017ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರೂ ಆಗಿದ್ದರು. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ತುಳು ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸುವ ಮೂಲಕ ತುಳು ಭಾಷೆಯ ಬೆಳವಣಿಗೆಗೆ ಶ್ರಮಿಸಿದ್ದರು.
ಅಖಿಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷರಾಗಿ (ಗುರಿಕಾರೆ) ಕಾರ್ಯನಿರ್ವಹಿಸುತ್ತಿದ್ದಾರೆ. ತುಳು ಭಾಷೆಯನ್ನು ಸಂವಿಧಾನದ 8ನೇ ಅನುಚ್ಚೇದಕ್ಕೆ ಸೇರಿಸಬೇಕು ಮತ್ತು ಅದಕ್ಕೆ ಅಧಿಕೃತ ಭಾಷೆಯ ಮಾನ್ಯತೆ ಸಿಗಬೇಕು ಎಂಬ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ.
ರಂಗಭೂಮಿ ಮತ್ತು ಜಾನಪದ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಗೌರವಗಳು ಲಭಿಸಿವೆ.ಮಂಗಳೂರು ತಾಲೂಕಿನ ಕಿನ್ನಿಗೋಳಿಯ ಎಳತ್ತೂರು ಗುತ್ತು ಡಾ. ಇಂದಿರಾ ಹೆಗ್ಗಡೆ ಕರಾವಳಿಯ ಖ್ಯಾತ ಲೇಖಕಿ ಮತ್ತು ಸಂಶೋಧಕಿ, ತುಳು ಮತ್ತು ಕನ್ನಡ ಭಾಷೆಗಳಲ್ಲಿ ಕಾವ್ಯ ಕಾದಂಬರಿ, ಕಥಾಸಂಕಲನ ಹಾಗೂ ಸಂಶೋಧನಾ ಕೃತಿಗಳನ್ನು ರಚಿಸಿರುವ ಇವರು ಎಂ.ಎ. ಡಿಲಿಟ್ ಪದವೀಧರರು.
ಮೋಹಿನಿಯ ಸೇಡು, ಪುರುಷರೇ ನಿಮಗೆ ನೂರು ನಮನಗಳು, ಬದುಕು (ಕಥಾಸಂಕಲನ), ಅಮಾಯಕಿ, ಒಡಲುರಿ, ಮಂಥನ, ಬದಿ, ಗುತ್ತಿನಿಂದ ಸೈನಿಕ ಜಗತ್ತಿಗೆ (ಕಾದಂಬರಿ), ಬಂಟರು-ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು, ತುಳುವೆರೆ ಅಟಿಲ ಅರಗಣೆ (ತುಳು), ಚೇಳಾರುಗುತ್ತು ಮಂಜನ್ನಾಯೆರ್, ತುಳುವರ ಮೂಲತಾನ ಆದಿ ಆಲಡೆ: ಪರಂಪರೆ ಮತ್ತು ಪರಿವರ್ತನೆ, ಸಿರಿಬಾರಿ ಲೋಕದಲ್ಲಿ ಸಿರಿಗಳು, ತುಳುನಾಡಿನ ಕಂಬುಲ-ಒಂದು ಉಪಾಸನಾ ಆಚರಣೆ (ಸಂಶೋಧನಾ ಕೃತಿಗಳು), ಕಾವ್ಯಗಳ ಪುಟದಿಂದ ನೀನೆದ್ದು ನಿಲ್ಲು (ಕವನ ಸಂಕಲನ), ಕೆಲವು ಲಲಿತ ಪ್ರಬಂಧಗಳು, ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರ ದೈವಗಳ, ಸಂಧಿ ಪಾಡ್ಡನ (ಸಂಪಾದನೆ), ಸರ್. ಎಂ. ವಿಶ್ವೇಶ್ವರಯ್ಯ (ಜೀವನ ಚರಿತ್ರೆ), ಸಪ್ತ ಕನೈಯರ ನೆಲದಲ್ಲಿ ನಮ್ಮ ನಡೆ, ಇಂದ್ರಪ್ರಸ್ಥದಿಂದ ಐತಿಹಾಸಿಕ ನಡೆ, ಹಿಮಾಲಯ ಶಿಖರಗಳ ಸಾನಿಧ್ಯದಲ್ಲಿ (ಪ್ರವಾಸ ಕಥನ) ಬಂಟ್ಸ್ (ಅನುವಾದ) ಕೃತಿಗಳನ್ನು ರಚಿಸಿದ್ದಾರೆ.
ವಸುದೇವಭೂಪಾಲಂ, ಅಂಬರೀಷ ಪ್ರಶಸ್ತಿ ಸಾಹಿತ್ಯ ಪುರಸ್ಕಾರ, ಅತ್ತಿಮಬ್ಬೆ ಅನಂತರಂಗ ಸಂಶೋಧನಾ ಪ್ರಶಸ್ತಿ ಅಪ್ಪ ಪ್ರಶಸ್ತಿ ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿ, ಕಮಲಾ ರಂಗಸ್ವಾಮಿ ದತ್ತಿನಿಧಿ ಬಹುಮಾನ, ಜಾನಪದ ಅಕಾಡಮಿಯ ಗೌರವ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ, ಯಶಸ್ವಿ ಮಹಿಳಾ ಉದ್ಯಮಿ ಪ್ರಶಸ್ತಿಗಳಲ್ಲದೆ 2026ನೇ ಸಾಲಿನ ಸಂದೇಶ ಪ್ರಶಸ್ತಿ ಲಭಿಸಿದೆ. ಹಲವು ಕಡೆಗಳಲ್ಲಿ ಸನ್ಮಾನಿತರಾಗಿ ದ್ದಾರೆ. ರಾಜ್ಯದ ನಾನಾ ಕಡೆ ನಡೆದ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಸದಸ್ಯೆಯಾಗಿ, ಕಾರ್ಯಕಾರಿಣಿ ಸಮಿತಿ ಸದಸ್ಯೆಯಾಗಿ, ಉಪಾಧ್ಯಕ್ಷೆಯಾಗಿ, ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.