ಅಗ್ರಿಗೋಲ್ಡ್ ಹೂಡಿಕೆದಾರರ ದಾಖಲೆ ಪರಿಶೀಲನೆ ಆರಂಭ!

ಮಂಗಳೂರು: ಅಗ್ರಿಗೋಲ್ಡ್ ಹಗರಣದಲ್ಲಿ ಹಣ ಕಳೆದುಕೊಂಡ ಹೂಡಿಕೆದಾರರಿಗೆ ಹೊಸ ಭರವಸೆ ಮೂಡಿದ್ದು, ಆಂಧ್ರಪ್ರದೇಶ ಸರ್ಕಾರ ಹಾಗೂ ಕರ್ನಾಟಕ ಸಿಐಡಿ ಸಹಯೋಗದಲ್ಲಿ ಬಾಂಡ್ ಮತ್ತು ರಸೀದಿಗಳ ಪರಿಶೀಲನಾ ಪ್ರಕ್ರಿಯೆ ಆರಂಭವಾಗಿದೆ ಎಂದು ರಾಜ್ಯ ಅಸಂಘಟಿತ ಒಕ್ಕೂಟದ ರಾಜ್ಯಾಧ್ಯಕ್ಷ ಸಿ. ರಾಘವೇಂದ್ರ ಕುಂಬ್ಳೆ ತಿಳಿಸಿದ್ದಾರೆ.

ಕರ್ನಾಟಕದ ಬೆಂಗಳೂರು, ತುಮಕೂರು, ಮಂಡ್ಯ, ಬಾಗಲಕೋಟೆ, ಉಡುಪಿ, ರಾಯಚೂರು, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ ಹಾಗೂ ಹಾಸನ ಸೇರಿದಂತೆ 9 ಕೇಂದ್ರಗಳಲ್ಲಿ ದಾಖಲೆ ಪರಿಶೀಲನೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನೂಕುನುಗ್ಗಲು ತಪ್ಪಿಸಲು ಪ್ರತಿದಿನ ಸುಮಾರು 100 ಮಂದಿಗೆ ಟೋಕನ್ ನೀಡಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಹಳೆಯ ಬಾಂಡ್ ಹಾಗೂ ರಸೀದಿಗಳು ಕಳೆದುಹೋಗಿರುವುದು, ಹೂಡಿಕೆದಾರರು ಮೃತಪಟ್ಟಿರುವುದು ಮತ್ತು ದಾಖಲೆಗಳು ಜಪ್ತಿಯಾಗಿರುವಂತಹ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ಬಾಂಡ್ ಹಾಗೂ ರಸೀದಿಗಳ ಕಲರ್ ಝೆರಾಕ್ಸ್ ಪ್ರತಿಗಳ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಎಲ್ಲ ಹೂಡಿಕೆದಾರರ ದಾಖಲೆಗಳ ಪರಿಶೀಲನೆ ಪೂರ್ಣಗೊಳ್ಳುವವರೆಗೂ ಪ್ರಕ್ರಿಯೆ ಮುಂದುವರಿಯಲಿದೆ. ಮಂಗಳೂರು ಭಾಗದ ಪರಿಶೀಲನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಅಧಿಕೃತ ಪ್ರಕಟಣೆ ಬಂದ ಬಳಿಕ ಮಾಹಿತಿ ನೀಡಲಾಗುವುದು. ಆದ್ದರಿಂದ ಸಂತ್ರಸ್ತರು ಆತಂಕಪಡದೆ, ವದಂತಿಗಳಿಗೆ ಕಿವಿಗೊಡದೆ, ಶಾಂತಿಯುತವಾಗಿ ಸಹಕರಿಸುವಂತೆ ಸಿ. ರಾಘವೇಂದ್ರ ಕುಂಬ್ಳೆ ಮನವಿ ಮಾಡಿದ್ದಾರೆ.
ದಾಖಲೆ ಪರಿಶೀಲನೆ ಆರಂಭವಾಗಿರುವುದು ಹಣ ಮರುಪಾವತಿಗೆ ತಕ್ಷಣದ ಖಾತರಿಯಲ್ಲ. ಮುಂದಿನ ಪ್ರಕ್ರಿಯೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಬೇಕಿದೆ.