ಕೇರಳದಲ್ಲಿ ನಾಲ್ಕು ತಿಂಗಳ ಹಸುಳೆಯ ಕೊಲೆ: ತಂದೆಯೇ ಆರೋಪಿ!

ಕೋಝಿಕ್ಕೋಡ್ : ಕೇರಳದ ಕೋಝಿಕ್ಕೋಡ್ನ ಪೆರುವಾಯಲ್ನಲ್ಲಿ ಕಳೆದ ವರ್ಷ ಅಕ್ಟೋಬರ್ನಲ್ಲಿ ನಡೆದ ನಾಲ್ಕು ತಿಂಗಳ ಹಸುಳೆಯ ಸಾವು ನೈಸರ್ಗಿಕವಲ್ಲ, ಅದೊಂದು ಕ್ರೂರ ಕೊಲೆ ಎಂಬ ಆಘಾತಕಾರಿ ಸತ್ಯವನ್ನು ಪೊಲೀಸರು ತನಿಖೆಯಿಂದ ಬಯಲಿಗೆಳೆದಿದ್ದಾರೆ. ರಾತ್ರಿಯಲ್ಲಿ ಮಗು ಅಳುತ್ತಿದ್ದುದಕ್ಕೆ ವಿಪರೀತ ಕೋಪಗೊಂಡ ಮದ್ಯವ್ಯಸನಿ ತಂದೆಯೇ ಹಸುಳೆಯನ್ನು ಹೊಡೆದು ಕೊಂದಿರುವುದು ದೃಢಪಟ್ಟಿದೆ.ಕೊಲೆ ಆರೋಪದ ಮೇಲೆ ಕುಟ್ಟಿಕ್ಕತ್ತೂರಿನ ವಯಲ್ಕರ ಮೂಲದ ತಂದೆ ಶಿಜಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಪತಿಯ ಕೃತ್ಯವನ್ನು ಮುಚ್ಚಿಹಾಕಲು ಯತ್ನಿಸಿದ ಮಗುವಿನ ತಾಯಿ ಅಂಜನಾಳನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯು ಅಕ್ಟೋಬರ್ 1, 2025ರಂದು ನಡೆದಿತ್ತು. ಮಗು ಎಚ್ಚರಗೊಳ್ಳುತ್ತಿಲ್ಲ ಹಾಗೂ ಮೂಗಿನಿಂದ ಕಪ ಬರುತ್ತಿದೆ ಎಂದು ಕಥೆ ಕಟ್ಟಿ ಶಿಜಿನ್ ಮತ್ತು ಅಂಜನಾ ದಂಪತಿ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆತಂದಿದ್ದರು. ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿತ್ತು.
ಆರಂಭದಲ್ಲಿ ಮಗುವಿನ ಸಾವು ಸಹಜ ಸಾವು ಎಂದು ಬಿಂಬಿಸಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ಶರೀರದ ಮೇಲೆ ತೀವ್ರ ಹಲ್ಲೆಯ ಗುರುತುಗಳು ಪತ್ತೆಯಾಗಿದ್ದು, ಇದು ನೈಸರ್ಗಿಕ ಸಾವಲ್ಲ ಎಂಬುದು ವೈದ್ಯರಿಂದ ಸ್ಪಷ್ಟವಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆ ನಡೆದಿರುವುದು ಗೊತ್ತಾದರೂ ತಾಯಿ ಅಂಜನಾ ಆರಂಭದಲ್ಲಿ ಸತ್ಯ ಬಾಯಿ ಬಿಡದೆ ಮೌನವಾಗಿದ್ದರು. ಆದರೆ ಸ್ಥಳೀಯರ ಅನುಮಾನ ಹಾಗೂ ಸಾರ್ವಜನಿಕರ ಒತ್ತಡದಿಂದ ಎಚ್ಚೆತ್ತ ಪೊಲೀಸರು ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಈ ವೇಳೆ, ರಾತ್ರಿ ಮಗು ಅಳು ನಿಲ್ಲಿಸದಿದ್ದಕ್ಕೆ ಕುಡಕ ಶಿಜಿನ್ ಮಗುವಿನ ಮೇಲೆ ಹಲ್ಲೆ ನಡೆಸಿ ಕೊಂದಿರುವುದಾಗಿ ಅಂಜನಾ ಅಂತಿಮವಾಗಿ ತಪ್ಪೊಪ್ಪಿಕೊಂಡರು.
ತಪ್ಪೊಪ್ಪಿಗೆಯ ಬೆನ್ನಲ್ಲೇ ಪೊಲೀಸರು ಶಿಜಿನ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಸಾಕ್ಷ್ಯಗಳನ್ನು ಮುಚ್ಚಿಹಾಕಿ ಅಪರಾಧಿಗೆ ಸಾಥ್ ನೀಡಿದ ತಾಯಿ ಅಂಜನಾಳನ್ನೂ ಸಹ ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
