ಮಹಾರಾಷ್ಟ್ರ: ಥಾಣೆಯಲ್ಲಿ ಶಿವಸೇನಾ (UBT) ಮುಖಂಡ ಪ್ರದೀಪ್ ಪುರ್ಣೇಕರ್ ಗುಂಡಿಕ್ಕಿ ಹ-ತ್ಯೆ!

ಮುಂಬೈ: ಮಹಾರಾಷ್ಟ್ರದ ಥಾಣೆಯಲ್ಲಿ ಶಿವಸೇನೆಯ (ಯುಬಿಟಿ) ನಾಯಕ ಪ್ರದೀಪ್ ಪುರ್ಣೇಕರ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.

ಮಂಗಳವಾರ (ಸೆ.29) ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಈ ಘಟನೆ ಸಂಭವಿಸಿದೆ. ಶಿವಸೇನೆಯ ಮಾನಪಾಡ ಉಪವಿಭಾಗದ ಮುಖ್ಯಸ್ಥರಾಗಿದ್ದ ಪ್ರದೀಪ್ ಅವರು ತಮ್ಮ ಕಚೇರಿಯಲ್ಲಿದ್ದಾಗ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿ, ಅವರ ಮೇಲೆ ಎರಡಕ್ಕಿಂತ ಹೆಚ್ಚು ಸುತ್ತು ಗುಂಡು ಹಾರಿಸಿದ್ದಾರೆ.
ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರ ತುರ್ತು ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಘಟನೆ ನಡೆದ ಕಪುರ್ಬಾವಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಸುಳಿವು ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಲಾಗುತ್ತಿದ್ದು, ಥಾಣೆಯ ಪ್ರಮುಖ ನಿರ್ಗಮನ ಮಾರ್ಗಗಳಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿ ತನಿಖೆ ತೀವ್ರಗೊಳಿಸಲಾಗಿದೆ.
ವಿಧಿವಿಜ್ಞಾನ (ಫೊರೆನ್ಸಿಕ್) ತಂಡವೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಹತ್ಯೆಯ ಹಿಂದಿನ ನಿಖರ ಉದ್ದೇಶ ಹಾಗೂ ದುಷ್ಕರ್ಮಿಗಳ ಕುರಿತು ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.