ಹೊಸದಿಲ್ಲಿ: ಗಾಯದ ಸಮಸ್ಯೆಯಿಂದ ಏಶ್ಯನ್ ಗೇಮ್ಸ್ನಿಂದ ಹೊರಗುಳಿದ ನೀರಜ್ ಚೋಪ್ರಾ; ಸ್ಥಾನ ಪಡೆಯಲು ಮೂವರ ನಡುವೆ ಪೈಪೋಟಿ

ಹೊಸದಿಲ್ಲಿ: ಭಾರತದ ಜಾವೆಲಿನ್ ಎಸೆತದ ತಾರೆ ನೀರಜ್ ಚೋಪ್ರಾ ಗಾಯದ ಸಮಸ್ಯೆಯಿಂದಾಗಿ ಮುಂಬರುವ ಏಶ್ಯನ್ ಗೇಮ್ಸ್ನಿಂದ ಹೊರಬಿದ್ದ ಬಳಿಕ, ಅವರ ಸ್ಥಾನವನ್ನು ತುಂಬುವವರು ಯಾರು ಎಂಬ ಕುತೂಹಲ ಉಂಟಾಗಿದೆ.
ಹಿಮ್ಮಡಿಯ ಗಾಯದ ಕಾರಣದಿಂದಾಗಿ ಹಾಲಿ ಋತುವಿನ ಉಳಿದ ಭಾಗದಿಂದ ಹೊರಗುಳಿಯುವುದಾಗಿ ಎರಡು ಬಾರಿಯ ಹಾಲಿ ಏಶ್ಯನ್ ಚಾಂಪಿಯನ್ ನೀರಜ್ ಚೋಪ್ರಾ ಪ್ರಕಟಿಸಿದ್ದಾರೆ.
ನೀರಜ್ ಅವರ ಬದಲಿಗೆ ಬೇರೊಬ್ಬರನ್ನು ಶೀಘ್ರದಲ್ಲೇ ಹೆಸರಿಸಲಾಗುವುದು ಎಂದು ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ (ಎಎಫ್ಐ) ಪ್ರಕಟಣೆಯಲ್ಲಿ ತಿಳಿಸಿದೆ. ಹಾಗಾಗಿ, ರೋಹಿತ್ ಯಾದವ್ ಅವರೊಂದಿಗೆ ಭಾರತವು ಈ ಕ್ರೀಡಾಕೂಟದ ಪುರುಷರ ಜಾವೆಲಿನ್ ತ್ರೋನಲ್ಲಿ ಇಬ್ಬರು ಸ್ಪರ್ಧಿಗಳನ್ನು ಹೊಂದಲಿದೆ.

ನೀರಜ್ ಅವರ ಸ್ಥಾನವನ್ನು ತುಂಬಬಲ್ಲ ಮೂವರು ಸಂಭಾವ್ಯ ಸ್ಪರ್ಧಿಗಳು:
ಯಶ್ ವೀರ್ ಸಿಂಗ್: ಗ್ಲಾಸ್ಕೋದಲ್ಲಿ ಇತ್ತೀಚೆಗೆ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಯಶ್ ವೀರ್ ಸಿಂಗ್ ತನ್ನ ವೈಯಕ್ತಿಕ ಅತ್ಯುತ್ತಮ ಸಾಧನೆಯೊಂದಿಗೆ ಕಂಚಿನ ಪದಕ ಗೆದ್ದು ಎಲ್ಲರ ಗಮನ ಸೆಳೆದಿದ್ದಾರೆ.
ಏಶ್ಯನ್ ಗೇಮ್ಸ್ಗೆ ನೀರಜ್ ಅವರ ಸ್ಥಾನಕ್ಕೆ ಆಯ್ಕೆಯಾಗಲು ಯಶ್ ವೀರ್ ಸಿಂಗ್ ಮುಂಚೂಣಿಯಲ್ಲಿದ್ದಾರೆ.
ಶಿವಂ ಲೊಹಾಕರೆ: 2026 ಮೇ 25 ರಂದು ರಾಂಚಿಯ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ 29ನೇ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಫೆಡರೇಶನ್ ಕ್ರೀಡಾಕೂಟದಲ್ಲಿ ಮಹಾರಾಷ್ಟ್ರದ ಶಿವಂ ಲೊಹಾಕರೆ ಪುರುಷರ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಮಹಾರಾಷ್ಟ್ರದ ಶಿವಂ ಲೊಹಾಕರೆ 21 ವರ್ಷದ ಎಡಗೈ ಜಾವೆಲಿನ್ ಎಸೆತಗಾರ ಆಗಿದ್ದು, ಈ ಋತುವಿನಲ್ಲಿ ಆರು ಕೂಟಗಳಲ್ಲಿ ಸ್ಪರ್ಧಿಸಿದ್ದು, ಮೂರರಲ್ಲಿ 80 ಮೀಟರ್ ಗಡಿ ದಾಟಿದ್ದಾರೆ. ಈ ಪೈಕಿ, ಮೇ ತಿಂಗಳಲ್ಲಿ ನಡೆದ ಫೆಡರೇಶನ್ ಕಪ್ನಲ್ಲಿ ಅವರು 81.71 ಮೀಟರ್ ದೂರ ಈಟಿ ಎಸೆದು ತನ್ನ ಶ್ರೇಷ್ಠ ಸಾಧನೆಯನ್ನು ದಾಖಲಿಸಿದ್ದಾರೆ ಹಾಗೂ ಚಿನ್ನ ಗೆದ್ದಿದ್ದಾರೆ.
ಆನಂದ್ ಸಿಂಗ್: ಆನಂದ್ ಸಿಂಗ್ ಉತ್ತರ ಪ್ರದೇಶದ ಅಜಂಗಢದ ಕಿಶುನ್ ದೇವ್ಪುರ ಗ್ರಾಮದ ಭರವಸೆಯ ಜಾವೆಲಿನ್ ಎಸೆತಗಾರ.
ಈ ಋತುವಿನಲ್ಲಿ ಭಾಗವಹಿಸಿದ ಎಂಟು ಸ್ಪರ್ಧೆಗಳಲ್ಲಿ ಏಳರಲ್ಲಿ ಆನಂದ್ 75 ಮೀಟರ್ ಗಡಿ ದಾಟಿದ್ದಾರೆ. ತನ್ನ ವೃತ್ತಿಜೀವನದ ಮೊದಲ ಅಂತರರಾಷ್ಟ್ರೀಯ ಸ್ಪರ್ಧೆ ಏಶ್ಯನ್ ಅಂಡರ್-23 ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಅವರು ತನ್ನ ವೈಯಕ್ತಿಕ ಗರಿಷ್ಠ 80.57 ಮೀಟರ್ ದೂರ ಈಟಿ ಎಸೆದು ಚಿನ್ನದ ಪದಕ ಗೆದ್ದರು.