ಹೈದರಾಬಾದ್: ಯದಾದ್ರಿ ಭುವನಗಿರಿ ಜಿಲ್ಲೆಯ ಫಾರ್ಮಾ ಕಂಪನಿಯಲ್ಲಿ ಭೀಕರ ರಿಯಾಕ್ಟರ್ ಸ್ಫೋಟ: ಇಬ್ಬರು ಕಾರ್ಮಿಕರು ದುರ್ಮರಣ

ಹೈದರಾಬಾದ್: ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯ ಫಾರ್ಮಾ ಕಂಪನಿಯಲ್ಲಿ ಸಂಭವಿಸಿದ ರಿಯಾಕ್ಟರ್ ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಪೋಚಂಪಲ್ಲಿ ಮಂಡಲದಲ್ಲಿರುವ ಘಟಕದಲ್ಲಿ ಕಾರ್ಮಿಕರು ಪಾಳಿ ಬದಲಾಯಿಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ.
“ಇಬ್ಬರು ಸಾವನ್ನಪ್ಪಿದ್ದಾರೆ. ಒಂಬತ್ತು ಜನರು ಗಾಯಗೊಂಡಿದ್ದಾರೆ, ಇದರಲ್ಲಿ ಇಬ್ಬರು ಶೇಕಡಾ 50 ಕ್ಕಿಂತ ಹೆಚ್ಚು ಸುಟ್ಟಗಾಯಗಳನ್ನು ಹೊಂದಿದ್ದರೆ, ಏಳು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಂತರ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು.
ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
