ಹೋಮ್‌ವರ್ಕ್ ಪರಿಶೀಲಿಸುವ ವೇಳೆ ಶಿಕ್ಷಕಿ ಹಲ್ಲೆ: ಯುಕೆಜಿ ವಿದ್ಯಾರ್ಥಿ ಪ್ರಣಯ್ ತೇಜ ಸಾ*ವು

ವಿಶಾಖಪಟ್ಟಣಂ: ಹೋಮ್‌ವರ್ಕ್ ಪರಿಶೀಲಿಸುವಾಗ ಶಿಕ್ಷಕಿಯೊಬ್ಬರು ತರಗತಿಯಲ್ಲೇ 6 ವರ್ಷದ ಬಾಲಕನನ್ನು ಬಟ್ಟೆ ಕಳಚಲು ಯತ್ನಿಸಿ, ಕೆನ್ನೆಗೆ ಹೊಡೆದ ಪರಿಣಾಮ ಆತ ಸಾವನ್ನಪ್ಪಿರುವ ಭೀಕರ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ‘ಒನ್ ಟೌನ್’ ಪ್ರದೇಶದಲ್ಲಿ ಗುರುವಾರ (ಆಗಸ್ಟ್ 20) ಸಂಭವಿಸಿದೆ.

ಲಿಟಲ್ ಗಾರ್ಡನ್ಸ್ ಶಾಲೆಯ ಯುಕೆಜಿ ವಿದ್ಯಾರ್ಥಿ ಪ್ರಣಯ್ ತೇಜ ಮೃತಪಟ್ಟ ಬಾಲಕ. ಮಗುವನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಶಿಕ್ಷಕಿಯ ಹಲ್ಲೆಯಿಂದಾಗಿಯೇ ಮಗು ಮೃತಪಟ್ಟಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಿಂಗ್ ಜಾರ್ಜ್ ಆಸ್ಪತ್ರೆಯ ಹೊರಗೆ ಬಾಲಕನ ಪೋಷಕರು ಮತ್ತು ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.
ಶಾಲೆಯ ತರಗತಿ ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಯ ನೈಜತೆ ಬೆಳಕಿಗೆ ಬಂದಿದೆ. ಹೋಮ್‌ವರ್ಕ್ ಪರಿಶೀಲಿಸುವಾಗ ಶಿಕ್ಷಕಿ ಬಾಲಕನನ್ನು ಅವಮಾನಿಸುವ ಉದ್ದೇಶದಿಂದ ಆತನ ಬಟ್ಟೆ ಬಿಚ್ಚಲು ಯತ್ನಿಸಿ ಹತ್ತಿರಕ್ಕೆ ಎಳೆದಾಡಿದ್ದಾರೆ. ಬಾಲಕ ಅಳುತ್ತಾ ತಡೆಯಲು ಯತ್ನಿಸಿದಾಗ, ಶಿಕ್ಷಕಿ ಆತನ ಕೆನ್ನೆಗೆ ಜೋರಾಗಿ ಬಾರಿಸಿದ್ದಾರೆ. ಸಿಸಿಟಿವಿಯಲ್ಲಿ ಹೊಡೆತ ತಿಂದ ಮಗು ಕ್ಷಣಕಾಲ ಅಲ್ಲೆ ನಿಂತು, ನಂತರ ಶಿಕ್ಷಕಿಯ ಮೇಲೆಯೇ ಕುಸಿದುಬೀಳುವುದು ಕಂಡುಬಂದಿದೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಲಕನ ಆರೋಗ್ಯ ಸ್ಥಿತಿ, ತರಗತಿಯ ಸಿಸಿಟಿವಿ ದೃಶ್ಯಾವಳಿ ಹಾಗೂ ಮರಣೋತ್ತರ ಪರೀಕ್ಷೆಯ (Post-mortem) ವರದಿಯನ್ನು ಆಧರಿಸಿ ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.