ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 9 ಕೋಟಿ ರೂ. ನಗದು ವಶಕ್ಕೆ!

ಬೆಂಗಳೂರು: ನಗರದ ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಎಕ್ಸ್‌ಪ್ರೆಸ್‌ವೇ ಟೋಲ್ ಪ್ಲಾಜಾ ಬಳಿ ಭಾರಿ ಪ್ರಮಾಣದ ಅಕ್ರಮ ನಗದು ಸಾಗಿಸುತ್ತಿದ್ದ ಕಾರನ್ನು ತಡೆದ ಪೊಲೀಸರು ಹಾಗೂ ಆದಾಯ ತೆರಿಗೆ (IT) ಇಲಾಖೆ ಅಧಿಕಾರಿಗಳು ಕಾರಿನಲ್ಲಿದ್ದ ₹9 ಕೋಟಿ ನಗದನ್ನು ವಶಪಡಿಸಿಕೊಂಡಿದ್ದಾರೆ.ಆಗಸ್ಟ್ 18ರಂದು ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಯೂನಿಟ್-22ರ ಉಪನಿರ್ದೇಶಕರಾದ ಜಗದೀಶ್ ಅವರಿಂದ ಲಭಿಸಿದ ಖಚಿತ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿನತ್ತ ತೆರಳುತ್ತಿದ್ದ ‘KL 20 T 8629’ ನೋಂದಣಿ ಸಂಖ್ಯೆಯ ಹ್ಯುಂಡೈ ಕ್ರೆಟಾ ಕಾರನ್ನು ರಾತ್ರಿ ಸುಮಾರು 10.30ರ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ಎಕ್ಸ್‌ಪ್ರೆಸ್‌ವೇ ಟೋಲ್ ಪ್ಲಾಜಾ ದಾಟಿದ ಬಳಿಕ ಸಿಗ್ನಲ್ ಬಳಿ ತಡೆಯಲಾಯಿತು. ಕಾರಿನಲ್ಲಿದ್ದ ಸೂಟ್‌ಕೇಸ್‌ಗಳಲ್ಲಿ 500 ರೂಪಾಯಿ ಮುಖಬೆಲೆಯ ಕಟ್ಟುಗಳಲ್ಲಿದ್ದ ಬರೋಬ್ಬರಿ ₹9 ಕೋಟಿ ನಗದು ಪತ್ತೆಯಾಗಿದೆ.
ಕಾರಿನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಅವರಲ್ಲಿ ಒಬ್ಬನನ್ನು ತಮಿಳುನಾಡಿನ ತೂತ್ತುಕುಡಿಯ ‘ಸಿಂಧು ಜ್ಯುವೆಲ್ಲರ್ಸ್’ಗೆ ಸಂಬಂಧಿಸಿದ ಸಚಿನ್ (42) ಎಂದು ಗುರುತಿಸಲಾಗಿದೆ. ಈ ಇಬ್ಬರೂ ನೀಡಿದ ಸುಳಿವು ಹಾಗೂ ಸಂಪರ್ಕಿತ ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ತಮಿಳುನಾಡಿನಲ್ಲಿ ನಡೆಸಿದ ಸರಣಿ ಶೋಧ ಕಾರ್ಯದಲ್ಲಿ ಹೆಚ್ಚುವರಿಯಾಗಿ ₹1.3 ಕೋಟಿ ನಗದು ಜಪ್ತಿ ಮಾಡಲಾಗಿದೆ. ಪ್ರಸ್ತುತ ಈ ಹಣದ ಮೂಲ ಯಾವುದು ಹಾಗೂ ಯಾರಿಗೆ ತಲುಪಿಸಲು ಒಯ್ಯಲಾಗುತ್ತಿತ್ತು ಎಂಬುದರ ಕುರಿತು ಆದಾಯ ತೆರಿಗೆ ಇಲಾಖೆ ತನಿಖೆ ಮುಂದುವರಿಸಿದೆ.
