ಮೂಡುಬಿದಿರೆ: ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅವಘಡ; ಒಂದೇ ಕುಟುಂಬದ ಮೂವರು ಗಂಭೀರ ಗಾಯ!

ಮೂಡುಬಿದಿರೆ : ಬಾಡಿಗೆ ಮನೆಯೊಂದರಲ್ಲಿ ಮಂಗಳವಾರ ನಸುಕಿನ ವೇಳೆ ಅಡುಗೆ ಅನಿಲ (LPG) ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಒಂದೇ ಕುಟುಂಬದ ಮೂವರು ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ಮಿಜಾರು ಗ್ರಾಮದಲ್ಲಿ ಸಂಭವಿಸಿದೆ. ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವರಾಮ (31), ಅವರ ಪತ್ನಿ ಗಂಗಾ (25) ಹಾಗೂ ಆರು ವರ್ಷದ ಪುತ್ರ ಆದರ್ಶ್ (6) ಗಾಯಗೊಂಡ ದುರ್ದೈವಿಗಳು.

ಮಿಜಾರಿನಲ್ಲಿರುವ ಬಾಡಿಗೆ ಮನೆಯಲ್ಲಿ ಮಂಗಳವಾರ ನಸುಕಿನ ವೇಳೆ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಮನೆತುಂಬಾ ಹರಡಿಕೊಂಡಿತ್ತು ಎನ್ನಲಾಗಿದೆ. ಈ ವೇಳೆ ದಿಢೀರನೆ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಕೊಠಡಿಗೆ ಬೆಂಕಿ ವ್ಯಾಪಿಸಿದೆ. ಘಟನೆಯಲ್ಲಿ ಶಿವರಾಮ ಅವರಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಪತ್ನಿ ಹಾಗೂ ಮಗನಿಗೂ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಾಗಲು ನಿಖರ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮೂಡುಬಿದಿರೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.