Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗ್ಲಾಸ್ಕೋ ಕಾಮನ್ವೆಲ್ತ್ ಗೇಮ್ಸ್ 2026: ಸ್ಕಾಟ್ಲೆಂಡ್‌ನಲ್ಲಿ ಪಾಕ್ ಬಾಕ್ಸರ್ ಸೇರಿ ಹಲವು ಕ್ರೀಡಾಪಟುಗಳು ನಾಪತ್ತೆ!

Spread the love

ಗ್ಲಾಸ್ಕೋ: ಕಾಮನ್ವೆಲ್ತ್ ಗೇಮ್ಸ್ 2026ರ ಮುಕ್ತಾಯದ ಬಳಿಕ ಸ್ಕಾಟ್ಲಂಡ್ನಲ್ಲಿ ಪಾಕಿಸ್ತಾನದ ಬಾಕ್ಸರ್ ಕುದ್ರತುಲ್ಲಾ ಸೇರಿದಂತೆ ಹಲವಾರು ಕ್ರೀಡಾಪಟುಗಳು ನಾಪತ್ತೆಯಾಗಿದ್ದಾರೆ ಎಂದು India Today ವರದಿ ಮಾಡಿದೆ.
ಈ ಘಟನೆಗಳ ಹಿನ್ನೆಲೆಯಲ್ಲಿ ನಾಪತ್ತೆಯಾದ ಆಟಗಾರರ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಗ್ಲಾಸ್ಕೋದಲ್ಲಿ ರವಿವಾರ ಕ್ರೀಡಾಕೂಟ ಮುಕ್ತಾಯಗೊಂಡ ನಂತರ ನಾಪತ್ತೆಯಾಗಿರುವ ಹಲವಾರು ಕ್ರೀಡಾಪಟುಗಳ ಬಗ್ಗೆ ವರದಿಗಳನ್ನು ಸ್ವೀಕರಿಸಿರುವುದಾಗಿ ಸ್ಕಾಟ್ಲಂಡ್ ಪೊಲೀಸರು ಮಂಗಳವಾರ ಖಚಿತಪಡಿಸಿದ್ದಾರೆ. ಈ ನಾಪತ್ತೆ ಪ್ರಕರಣಗಳ ಹಿಂದಿನ ಸಂದರ್ಭಗಳನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದ್ದು ಈ ಬಗ್ಗೆ ಯುಕೆ ಗೃಹ ಕಚೇರಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಬಾಕ್ಸರ್ ಕುದ್ರತುಲ್ಲಾ ಅವರು ಮರಳಿ ಹೋಗುವ ವಿಮಾನವನ್ನು ಹತ್ತದೆ ತಮ್ಮ ತಂಡದಿಂದ ನಾಪತ್ತೆಯಾಗಿದ್ದಾರೆ ಎಂದು ‘ಪಾಕಿಸ್ತಾನ್ ಟುಡೇ’ ವರದಿ ಮಾಡಿದೆ. ಹೊರಡುವ ಮುನ್ನ ತಂಡದ ಅಧಿಕಾರಿಗಳು ಅವರನ್ನು ಹುಡುಕಿಕೊಂಡು ಹೋದಾಗ ಅವರು ತಮ್ಮ ಕೋಣೆಯಲ್ಲಿ ಇರಲಿಲ್ಲ ಎನ್ನಲಾಗಿದೆ.
“ಕುದ್ರತುಲ್ಲಾ ಗ್ಲಾಸ್ಕೋದಲ್ಲಿ ಕ್ರೀಡಾಕೂಟ ಮುಗಿದ ಬಳಿಕ ನಾಪತ್ತೆಯಾಗಿದ್ದಾರೆ. ಅವರ ಪಾಸ್ಪೋರ್ಟ್ ತಂಡದ ಮ್ಯಾನೇಜರ್ ಬಳಿಯಿದ್ದರೂ ಈ ಘಟನೆ ನಡೆದಿರುವುದು ಅಧಿಕಾರಿಗಳನ್ನು ಗೊಂದಲಕ್ಕೀಡುಮಾಡಿದೆ” ಎಂದು ಪಾಕಿಸ್ತಾನ್ ಒಲಿಂಪಿಕ್ ಅಸೋಸಿಯೇಷನ್ ನ ಆಪ್ತ ಮೂಲಗಳನ್ನು ಉದ್ದೇಶಿಸಿ ಪಾಕಿಸ್ತಾನ್ ಟುಡೇ ವರದಿ ಮಾಡಿದೆ.

ಉಗಾಂಡಾದ 4 ಬಾಕ್ಸರ್ ಗಳು ನಾಪತ್ತೆ:
ಉಗಾಂಡಾದ ಎಸ್ಟಿಎಸ್ ಸ್ಪೋರ್ಟ್ ವರದಿ ಮಾಡಿರುವ ಪ್ರಕಾರ, ದೇಶದ ಆರು ಸದಸ್ಯರ ಬಾಕ್ಸಿಂಗ್ ತಂಡದ ನಾಲ್ವರು ಸದಸ್ಯರು ಮಂಗಳವಾರ ತಾಲ್ನಾಡಿಗೆ ಮರಳಬೇಕಿದ್ದ ತಮ್ಮ ನಿಗದಿತ ವಿಮಾನವನ್ನು ಹತ್ತದೆ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಕ್ರೀಡಾಪಟುಗಳನ್ನು ನುಹು ಬಟ್ಟೆ ಏಂಜಲ್ ಕಟುಶಾಬೆ, ಇಬ್ರಾಹಿಂ ಕೆಮಿಸ್ ಮತ್ತು ಎಮಿಲಿ ನಕಲೆಮಾ ಎಂದು ಗುರುತಿಸಲಾಗಿದೆ.
ನಾಪತ್ತೆಯಾದ ಬಾಕ್ಸರ್ಗಳ ಪೈಕಿ ಒಬ್ಬರೊಂದಿಗೆ ಮಾತನಾಡಿದ್ದಾಗಿ ಎಸ್ಟಿಎಸ್ ಸ್ಪೋರ್ಟ್ ವರದಿ ಮಾಡಿದೆ.
ನಾಲ್ವರೂ ಕ್ರೀಡಾಪಟುಗಳು ಸ್ಕಾಟ್ಲಂಡ್ನಲ್ಲಿ ಆಶ್ರಯ ಪಡೆಯಲು ಮತ್ತು ಅಲ್ಲಿಯೇ ತಮ್ಮ ಬಾಕ್ಸಿಂಗ್‌ ವೃತ್ತಿಜೀವನವನ್ನು ಮುಂದುವರಿಸಲು ಉದ್ದೇಶಿಸಿದ್ದಾರೆ. ಅಲ್ಲಿನ ಉತ್ತಮ ತರಬೇತಿ ಸೌಲಭ್ಯಗಳು ಮತ್ತು ಅವಕಾಶಗಳೇ ಇದಕ್ಕೆ ಕಾರಣ ಎಂದು ಅವರು ಹೇಳಿರುವುದಾಗಿ ಅದು ವರದಿ ವರದಿ ಮಾಡಿದೆ. ಈ ನಿರ್ಧಾರವನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ತಮ್ಮನ್ನು ತಪ್ಪಾಗಿ ಭಾವಿಸದಿರುವಂತೆಯೂ ಆ ಕ್ರೀಡಾಪಟು ತಾಯ್ಕಾಡಿನ ಜನರಲ್ಲಿ ಮನವಿ ಮಾಡಿದ್ದಾರೆ.

ಉಗಾಂಡಾ ತಂಡದ ವಕ್ತಾರರು ಈ ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ತಂಡದ ಉಳಿದ ಸದಸ್ಯರು ಈಗಾಗಲೇ ತಾಯ್ತಾಡಿಗೆ ಮರಳಿದ್ದಾರೆ ಎಂದು ಪ್ರತಿಕ್ರಿಯಿಸಿದೆ.
ಗ್ಲಾಸ್ಕೋ ಕಾಮನ್ವೆಲ್ತ್ 2026 ಸಂಘಟಕರ ಪ್ರತಿಕ್ರಿಯೆ:
ಕ್ರೀಡಾಕೂಟದ ಮುಕ್ತಾಯದ ಬಳಿಕ ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ನಗರದಿಂದ ನಿರ್ಗಮಿಸುತ್ತಿರುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವುದಾಗಿ ಗ್ಲಾಸ್ಕೋ 2026 ರ ವಕ್ತಾರೆ ಸೋಫಿ ಆಶ್ಚಾಫ್ಟ್ ಹೇಳಿದ್ದಾರೆ.
“ಕಳೆದ ಎರಡು ವಾರಗಳಲ್ಲಿ ಕಾಮನ್ವೆಲ್ತ್ ನ 74 ರಾಷ್ಟ್ರಗಳ 3,000 ಕ್ರೀಡಾಪಟುಗಳನ್ನು ಗ್ಲಾಸ್ಕೋಗೆ ಸ್ವಾಗತಿಸಿದ್ದೇವೆ. ಕ್ರೀಡಾಪಟುಗಳು ಮತ್ತು ಇತರ ಸಿಬ್ಬಂದಿಗಳು ನಗರದಿಂದ ನಿರ್ಗಮಿಸುತ್ತಿರುವಾಗ, ಕ್ರೀಡಾಕೂಟದ ಸುರಕ್ಷಿತ ಮತ್ತು ಸುಗಮ ಮುಕ್ತಾಯವನ್ನು ಖಚಿತಪಡಿಸಿಕೊಳ್ಳಲು ನಾವು ಸ್ಕಾಟ್ಲಂಡ್ ಪೊಲೀಸ್, ಗಡಿರಕ್ಷಣಾ ಪಡೆ ಮತ್ತು ಯುಕೆ ವೀಸಾ-ಇಮಿಗ್ರೇಷನ್ ಇಲಾಖೆಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಕಾಮನ್ವೆಲ್ತ್‌ ಗೇಮ್ಸ್ ನಲ್ಲಿ ಇದು ಮೊದಲೇನಲ್ಲ!
ಕಾಮನ್ವೆಲ್ತ್ ಗೇಮ್ಸ್ ನಂತರ ಕ್ರೀಡಾಪಟುಗಳು ನಾಪತ್ತೆಯಾಗುವ ವರದಿಗಳು ಹೊಸದೇನಲ್ಲ. ಹಿಂದಿನ ಹಲವಾರು ಆವೃತ್ತಿಗಳ ನಂತರವೂ, ವಿಶೇಷವಾಗಿ ಯುನೈಟೆಡ್ ಕಿಂಗ್ನಮ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಕ್ರೀಡಾಕೂಟಗಳ ನಂತರ ಈ ರೀತಿಯ ಘಟನೆಗಳು ಸಂಭವಿಸಿವೆ.
2022ರ ಬರ್ಮಿಂಗ್ಲಾಮ್ ಕಾಮನ್ವೆಲ್ತ್ ಗೇಮ್ನಲ್ಲಿ ಪಾಕಿಸ್ತಾನದ ಬಾಕ್ಸರ್ ಗಳಾದ ಸುಲೇಮಾನ್ ಬಲೋಚ್ ಮತ್ತು ನಝೀರುಲ್ಲಾ ಖಾನ್ ಅವರ ಪಾಸ್ಪೋರ್ಟ್ ಗಳು ತಂಡದ ಮ್ಯಾನೇಜೆಂಟ್ ಬಳಿ ಇದ್ದರೂ, ಅವರು ಕಣ್ಮರೆಯಾಗಿದ್ದರು.
2018ರ ಗೋಲ್ಡ್ ಕೋಸ್ಟ್ ಗೇಮ್ಸ್ ಮುಕ್ತಾಯಗೊಂಡ ಒಂದು ತಿಂಗಳ ಬಳಿಕವೂ ದೇಶವನ್ನು ತೊರೆಯದ ಸುಮಾರು 50 ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗಾಗಿ ಆಸ್ಟ್ರೇಲಿಯಾದ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಅದೇ ವೇಳೆ ಸುಮಾರು 190 ಇತರರು ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.
ರವಿವಾರ ಮುಕ್ತಾಯಗೊಂಡ 11 ದಿನಗಳ ಗ್ಲಾಸ್ಕೋ ಕಾಮನ್ವೆಲ್ತ್ ಗೇಮ್ನಲ್ಲಿ 74 ಕಾಮನ್ವೆಲ್ತ್ ರಾಷ್ಟ್ರಗಳನ್ನು ಪ್ರತಿನಿಧಿಸುವ 3,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *