ಬೆಳ್ತಂಗಡಿ: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪ್ರತ್ಯಕ್ಷಗೊಂಡ ಒಂಟಿ ಸಲಗ; ಕೆಲಕಾಲ ಸಂಚಾರ ಅಸ್ತವ್ಯಸ್ತ!

ಬೆಳ್ತಂಗಡಿ: ಧರ್ಮಸ್ಥಳ-ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟಿ ರಸ್ತೆಯ 9ನೇ ತಿರುವಿನ ಬಳಿ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಬೃಹತ್ ಒಂಟಿ ಸಲಗವೊಂದು ರಸ್ತೆ ಮಧ್ಯೆ ಪ್ರತ್ಯಕ್ಷಗೊಂಡು ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಘಟನೆ ಸಂಭವಿಸಿದೆ.

ಆಹಾರ ಹಾಗೂ ನೀರು ಅರಸಿ ಕಾಡಿನಿಂದ ರಸ್ತೆಗೆ ಬಂದ ಒಂಟಿ ಸಲಗವು ನಿಧಾನವಾಗಿ ರಸ್ತೆ ದಾಟಿದೆ. ಈ ವೇಳೆ ಘಾಟಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಸುರಕ್ಷತೆಯ ದೃಷ್ಟಿಯಿಂದ ದೂರದಲ್ಲೇ ವಾಹನಗಳನ್ನು ನಿಲ್ಲಿಸಿ ಆನೆ ಕಾಡಿಗೆ ತೆರಳುವವರೆಗೆ ಕಾಯಬೇಕಾಯಿತು. ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದ ಆನೆಯ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆನೆಯನ್ನು ಸುರಕ್ಷಿತವಾಗಿ ದಟ್ಟ ಅರಣ್ಯದೊಳಗೆ ಅಟ್ಟಿದ್ದಾರೆ. ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಾಡುಪ್ರಾಣಿಗಳ ಸಂಚಾರ ಹೆಚ್ಚಾಗಿರುವುದರಿಂದ, ವಿಶೇಷವಾಗಿ ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ವಾಹನ ಸವಾರರು ಅತಿವೇಗದ ಚಾಲನೆ ಮಾಡದೆ, ಪ್ರಾಣಿಗಳು ಕಂಡುಬಂದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.