ಕಾಸರಗೋಡು: ಮುಳಿಯಾರು ಗ್ರಾಮ ಪಂಚಾಯತ್ ಕಚೇರಿಗೆ ರಾತ್ರಿ ವೇಳೆ ನುಗ್ಗಿ ದುಷ್ಕರ್ಮಿಗಳಿಂದ ಹಾನಿ!

ಕಾಸರಗೋಡು: ಮುಳಿಯಾರು ಗ್ರಾಮ ಪಂಚಾಯತ್ ಕಚೇರಿಗೆ ರಾತ್ರಿ ವೇಳೆ ನುಗ್ಗಿದ ಕಿಡಿಗೇಡಿಗಳು ಕಚೇರಿಯೊಳಗೆ ಹಾನಿ ಎಸಗಿದ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳು ಪಂಚಾಯತ್ ಕಚೇರಿಯ ಮುಖ್ಯ ಬಾಗಿಲಿನ ಬೀಗವನ್ನು ನಕಲಿ ಕೀಲಿಕೈ ಬಳಸಿ ತೆರೆಯಲು ಪ್ರಯತ್ನಿಸಿದ್ದು, ಆದರೆ ಬೀಗ ತೆರೆಯಲು ಸಾಧ್ಯವಾಗದೆ ಕಳವು ಯತ್ನ ವಿಫಲಗೊಂಡಿದೆ. ಬಳಿಕ ಕಿಡಿಗೇಡಿಗಳು ಪಂಚಾಯತ್ ಅಧ್ಯಕ್ಷರಾದ ಕೆ.ಬಿ. ಮೊಹಮ್ಮದ್ ಕುಂಞ ಅವರ ಕಚೇರಿಗೆ ಕಲ್ಲೆಸೆದಿದ್ದಾರೆ ಎನ್ನಲಾಗಿದೆ.
ಕಿಟಕಿಯ ಗಾಜುಗಳು ಸಂಪೂರ್ಣವಾಗಿ ಪುಡಿಯಾಗಿವೆ. ಬೆಳಗ್ಗೆ ಪಂಚಾಯತ್ ಸಿಬ್ಬಂದಿ ಕಚೇರಿಯನ್ನು ತೆರೆಯಲು ಬಂದಾಗ ಕೃತ್ಯ ನಡೆದಿರುವುದು ಗಮನಕ್ಕೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪಂಚಾಯತ್ ಕಾರ್ಯದರ್ಶಿಯವರು ನೀಡಿದ ದೂರಿನಂತೆ ಆದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪರಿಸರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿದು ಬಂದಿದೆ.
