ಬೆಂಗಳೂರು: ಅತಿಯಾದ ಕಮಿಷನ್ ಕಾಟ; ಸ್ವಿಗ್ಗಿ ಸಂಸ್ಥೆಗೆ ಹೋಟೆಲ್ ಅಸೋಸಿಯೇಷನ್ ಗಡುವು!

ಬೆಂಗಳೂರು: ಅತಿಯಾದ ಕಮಿಷನ್ಗಳು, ರಿಯಾಯಿತಿ ಹಾಗೂ ಹಣ ಕಡಿತದಿಂದಾಗಿ ಹೋಟೆಲ್ಗಳು ಲಾಸ್ನಲ್ಲಿದ್ದು ಪಾರದರ್ಶಕ ವ್ಯವಹಾರ ಸೇರಿದಂತೆ ಕೆಲವೊಂದು ಬೇಡಿಕೆಯನ್ನು ಮುಂದಿಟ್ಟು ಆನ್ಲೈನ್ ಆಹಾರ ವಿತರಣಾ ಪ್ಲಾಟ್ಫಾರ್ಮ್ ಸ್ವಿಗ್ಗಿ ಸಂಸ್ಥೆಗೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಎಚ್ಚರಿಕೆ ಕೊಟ್ಟಿದೆ. ಆಗಸ್ಟ್ 15ರೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ಲಾಟ್ಫಾರ್ಮ್ ಅನ್ನು ಬಹಿಷ್ಕರಿಸುವುದಾಗಿ ವಾರ್ನ್ ಮಾಡಿದೆ.

ಕಳೆದ 10 ತಿಂಗಳಿನಿಂದ ನಿರಂತರವಾಗಿ ಮಾತುಕತೆ ನಡೆಸಿದರೂ ಸಮಸ್ಯೆಗೆ ಸೂಕ್ತ ಪರಿಹಾರ ಸಿಗದ ಹಿನ್ನೆಲೆಯಲ್ಲಿ, ಸಮಸ್ಯೆಗಳನ್ನು ಸರಿಪಡಿಸಲು ಸ್ವಿಗ್ಗಿಗೆ 15 ದಿನಗಳ ಅಂತಿಮ ಗಡುವು (ಆಗಸ್ಟ್ 15) ನೀಡಲಾಗಿದೆ.
ಹೋಟೆಲ್ ಮಾಲೀಕರ ಆರೋಪ
ಹೋಟೆಲ್ ಮಾಲೀಕರ ಅನುಮತಿಯಿಲ್ಲದೆ ಪ್ರಚಾರ ವೆಚ್ಚಗಳು, ಕ್ಲಿಕ್ ವೆಚ್ಚ, ಕಸ್ಟಮರ್ ಅಕ್ವಿಸಿಷನ್ (CPA) ಹಾಗೂ ಜಾಹೀರಾತು ಶುಲ್ಕಗಳ ಹೆಸರಿನಲ್ಲಿ ಹಣ ಕಡಿತಗೊಳಿಸಲಾಗುತ್ತಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಎಚ್ಎ ಗೌರವಾಧ್ಯಕ್ಷ ಪಿ.ಸಿ. ರಾವ್, “ನಮಗೆ ಸ್ವಿಗ್ಗಿಯ ಸಾಮಾನ್ಯ ಸೇವಾ ಶುಲ್ಕಕ್ಕೆ ಯಾವುದೇ ಅಭ್ಯಂತರವಿಲ್ಲ.
ಆದರೆ ಸೇವಾ ಶುಲ್ಕ, ಪೇಔಟ್ ಶುಲ್ಕ, ಮ್ಯಾಪ್-ಅಪ್ ಶುಲ್ಕ ಎಂದು ಹೇಳಿ 1 ಲಕ್ಷ ರೂಪಾಯಿ ಆರ್ಡರ್ ಹಣದಲ್ಲಿ ಹೋಟೆಲ್ ಮಾಲೀಕರಿಗೆ ಕೇವಲ 40,000 ದಿಂದ 50,000 ಮಾತ್ರ ನೀಡಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ. ಗ್ರಾಹಕರಿಂದ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್ಟಿ ಮೊತ್ತಕ್ಕೂ ಸ್ವಿಗ್ಗಿ ಸೇವಾ ಶುಲ್ಕ ವಿಧಿಸುತ್ತಿದೆ ಎಂದು ಸಂಘಟನೆ ಗಂಭೀರ ಆರೋಪ ಮಾಡಿದೆ.
ಹೋಟೆಲ್ ಸಂಘಟನೆಗಳ ಬೇಡಿಕೆಗಳು
- ಪ್ರತಿಯೊಂದು ಆರ್ಡರ್ನ ಕಮಿಷನ್, ಜಿಎಸ್ಟಿ, ಜಾಹೀರಾತು ವೆಚ್ಚ ಹಾಗೂ ರಿಯಾಯಿತಿಗಳನ್ನು ಪ್ರತ್ಯೇಕವಾಗಿ ಸ್ಪಷ್ಟಪಡಿಸುವ ಬಿಲ್ ನೀಡಬೇಕು.
- ಅನಗತ್ಯ ಜಾಹೀರಾತು ಹಾಗೂ ಪ್ರಚಾರ ಅಭಿಯಾನಗಳಿಂದ ಹೋಟೆಲ್ಗಳು ಹೊರಬರಲು ಸುಲಭವಾದ ‘ಒನ್-ಕ್ಲಿಕ್’ ಆಯ್ಕೆ ನೀಡಬೇಕು.
- ಹೋಟೆಲ್ ಮಾಲೀಕರ ಡಿಜಿಟಲ್ ಅಥವಾ ಲಿಖಿತ ಅನುಮತಿಯಿಲ್ಲದೆ ಯಾವುದೇ ರೀತಿಯ ಪ್ರಚಾರ ವೆಚ್ಚಗಳನ್ನು ಕಡಿತಗೊಳಿಸಬಾರದು.
ಸಂಘಟನೆಯು ಬಾಯ್ಕಾಟ್ ಎಚ್ಚರಿಕೆ ನೀಡಿದ್ದರೂ, ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಬಾಗಿಲು ತೆರೆದಿದೆ. “ಸ್ವಿಗ್ಗಿ ಮುಂದಿನ 15 ದಿನಗಳಲ್ಲಿ ಈ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿಕೊಂಡರೆ ನಾವು ಸೇವೆ ಮುಂದುವರಿಸುತ್ತೇವೆ. ಇಲ್ಲವಾದಲ್ಲಿ ನಮಗೆ ಬಾಯ್ಕಾಟ್ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ” ಎಂದು ಪಿ.ಸಿ. ರಾವ್ ತಿಳಿಸಿದ್ದಾರೆ. ಅಲ್ಲದೆ, ಇದರಿಂದ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಾಗಿಯೂ ಸಂಘ ಸ್ಪಷ್ಟಪಡಿಸಿದೆ.