ಅಸ್ಸಾಂ ಪ್ರವಾಹ: ಮಂಗಳವಾರ ಮತ್ತೆ 7 ಸಾವು, ಒಟ್ಟು ಮೃತರ ಸಂಖ್ಯೆ 75ಕ್ಕೆ ಏರಿಕೆ; 3.32 ಲಕ್ಷ ಜನರಿಗೆ ತಟ್ಟಿದ ಬಿಸಿ!

ಗುವಾಹಟಿ: ಅಸ್ಸಾಂನಲ್ಲಿ ಮಂಗಳವಾರ ಮತ್ತೆ ಏಳು ಜನರು ಪ್ರವಾಹಕ್ಕೆ ಬಲಿಯಾಗುವುದರೊಂದಿಗೆ ಒಟ್ಟು ಮೃತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಆದಾಗ್ಯೂ, ಏಳು ಜಿಲ್ಲೆಗಳಲ್ಲಿ ಪ್ರವಾಹ ಬಾಧಿತ ಜನರ ಸಂಖ್ಯೆ 3.32 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೋಮವಾರದಂದು ಆರು ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿದ್ದು, ಸುಮಾರು 4.45 ಲಕ್ಷ ಜನರು ಸಂಕಷ್ಟಕ್ಕೊಳಗಾಗಿದ್ದರು. ಇದೀಗ ಸಂತ್ರಸ್ತರ ಪ್ರಮಾಣ ಇಳಿಕೆಯಾಗಿದೆ.
ಹೊಸದಾಗಿ ವರದಿಯಾದ ಏಳು ಮೃತ್ಯುಗಳು ಶಿವಸಾಗರ್ ಜಿಲ್ಲೆಯ ನಾಝಿರಾ ವಿಭಾಗದಿಂದ ವರದಿಯಾಗಿವೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಶಿವಸಾಗರ್, ಚರಾಯೇವ್, ಗೋಲಾಗಾಟ್, ಜೋರ್ಹಾಟ್, ನಾಗೋನ್, ಸೋನಿತ್ಪುರ ಮತ್ತು ಕಾಮರೂಪ್ ಮೆಟ್ರೋಪಾಲಿಟನ್ ಹೀಗೆ ಏಳು ಜಿಲ್ಲೆಗಳು ಇನ್ನೂ ಪ್ರವಾಹದ ಸಂಕಷ್ಟದಲ್ಲಿಯೇ ಇದ್ದು 21 ಕಂದಾಯ ವಿಭಾಗಗಳು ಹಾಗೂ 622 ಗ್ರಾಮಗಳು ಜಲಾವೃತಗೊಂಡಿವೆ ಎಂದು ಪ್ರಾಧಿಕಾರ ತಿಳಿಸಿದೆ.
ರಾಜ್ಯದಲ್ಲಿ ಪ್ರವಾಹ ಪೀಡಿತರ ಸಂಖ್ಯೆ 3,32,639 ರಷ್ಟಿದ್ದು, ಚರಾಯೇವ್ ಜಿಲ್ಲೆಯು 1,42,756 ಸಂತ್ರಸ್ತರೊಂದಿಗೆ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದೆ. ನಂತರದಲ್ಲಿ ಶಿವಸಾಗರ್ (97,074) ಮತ್ತು ಜೋರ್ಹಾಟ್ (57,371) ಜಿಲ್ಲೆಗಳು ಹೆಚ್ಚು ಬಾಧಿತವಾಗಿವೆ.
81 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು ಮನೆಗಳನ್ನು ಕಳೆದುಕೊಂಡ 32,477 ಜನರು ಅಲ್ಲಿ ಆಶ್ರಯ ಪಡೆದಿದ್ದಾರೆ. ಇವುಗಳ ಜೊತೆಗೆ 34 ಪರಿಹಾರ ವಿತರಣಾ ಕೇಂದ್ರಗಳೂ ಸಹ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ಸೇನೆ, ವಾಯುಪಡೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ಸ್ಥಳೀಯ ಸ್ವಯಂಸೇವಕರು ಸೇರಿದಂತೆ ಹಲವು ಸಂಸ್ಥೆಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿರಂತರವಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ.