ಗ್ಲಾಸ್ಕೋ ಕಾಮನ್ವೆಲ್ತ್ ಗೇಮ್ಸ್ 2026: 10,000 ಮೀಟರ್ ಓಟದಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಭಾರತದ ಗುಲ್ಲೀರ್ ಸಿಂಗ್!

ಗ್ಲಾಸ್ಕೋ: ಕಾಮನ್ವೆಲ್ತ್ ಗೇಮ್ಸ್ 2026ರ ಪುರುಷರ 10,000 ಮೀಟರ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಓಟಗಾರ ಗುಲ್ವಿರ್ ಸಿಂಗ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
27:49.78 ನಿಮಿಷಗಳಲ್ಲಿ ಗುರಿ ತಲುಪಿದ ರಾಷ್ಟ್ರೀಯ ದಾಖಲೆ ಹೊಂದಿರುವ ಗುಲ್ವಿರ್ ಎರಡನೇ ಸ್ಥಾನ ಪಡೆದರು. ಆಸ್ಟ್ರೇಲಿಯಾದ ಕೈರಾಬಿನ್ಸನ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರೆ, ಐಲ್ ಆಫ್ ಮ್ಯಾನ್ ನ ಅಥೀಟ್ ಡೇವಿಡ್ ಮುಲ್ಲಾರ್ಕಿ ಕಂಚಿನ ಪದಕ ಗೆದ್ದರು . ಪ್ರಬಲ ಸ್ಪರ್ಧಿಗಳಾಗಿದ್ದ ಕೀನ್ಯಾ ಮತ್ತು ಉಗಾಂಡಾ ಅಥೀಟ್ ಗಳು ನಿರಾಸೆ ಅನುಭವಿಸಿದ್ದು ಅಚ್ಚರಿಗೆ ಕಾರಣವಾಯಿತು.

ನಿಖರವಾದ ರೇಸ್ ತಂತ್ರ
ಮಳೆಯಿಂದ ಕೂಡಿದ ತೇವದ ವಾತಾವರಣದಲ್ಲಿ ಗುಲ್ವಿರ್, ಸಂಯಮಿತ ಮತ್ತು ತಂತ್ರಬದ್ಧವಾದ ಓಟವನ್ನು ಪ್ರದರ್ಶಿಸಿದರು. 25 ಸುತ್ತುಗಳ ಸ್ಪರ್ಧೆಯ ಬಹುತೇಕ ಅವಧಿಯಲ್ಲಿ ಮುಂಚೂಣಿ ಗುಂಪಿನಲ್ಲಿಯೇ ಉಳಿದು, ಕೊನೆಯ ಘಟ್ಟಕ್ಕೆ ಬೇಕಾದ ಸಾಮರ್ಥ್ಯವನ್ನು ಉಳಿಸಿಕೊಳ್ಳುವ ತಂತ್ರವನ್ನು ಅನುಸರಿಸಿದರು. ಕೊನೆಯ ಲ್ಯಾಪ್ ವರೆಗೆ ಮೂರನೇ ಸ್ಥಾನದಲ್ಲಿದ್ದ ಗುಲ್ಲೀರ್, ಅಂತಿಮ ಕ್ಷಣಗಳಲ್ಲಿ ಅದ್ಭುತ ವೇಗವನ್ನು ಪ್ರದರ್ಶಿಸಿದರು. ಚಿನ್ನವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಅವರು ಶಕ್ತಿಶಾಲಿ ಫಿನಿಶಿಂಗ್ ಮೂಲಕ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾದರು.
ಈ ವಿಭಾಗದಲ್ಲಿ ಇದು ಭಾರತಕ್ಕೆ ಮೊದಲ ಪದಕವಾಗಿದ್ದು, ಕಾಮನ್ವೆಲ್ತ್ ಗೇಮ್ಸ್ ನ ದೂರದ ಓಟದ ವಿಭಾಗದಲ್ಲಿ ಭಾರತದ ಅತ್ಯಂತ ಶ್ರೇಷ್ಠ ಸಾಧನೆಗಳಲ್ಲಿ ಒಂದಾಗಿದೆ.